
ತುಮಕೂರು:ಪತ್ರಿಕಾ ರಂಗ ದೇಶದ ಡೆಮಾಕ್ರಸಿಯನ್ನು ಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿ ಗಣೇಶ್ ಅವರು ತಿಳಿಸಿದರು.
ಜನವರಿ 18 ಮತ್ತು 19 ರಂದು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಘಟಕ ಇವರ ಅತಿಥ್ಯದಲ್ಲಿ ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ವೇದಿಕೆ ನಿರ್ಮಾಣ, ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ ಸೇರಿದಂತೆ ಇತರೆ ಪೂರ್ವ ಸಿದ್ಧತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ನಮ್ಮ ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಶಿಕ್ಷಣ ಭೀಷ್ಮ ಡಾ. ಎಚ್.ಎಮ್ ಗಂಗಾಧರಯ್ಯ ನವರು ಕಟ್ಟಿ ಬೆಳೆಸಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ರಾಜ್ಯದ ಎಲ್ಲಾ ಪತ್ರಕರ್ತರು ಒಂದೆಡೆ ಸೇರಿ ಸಮ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರು ನೀಡಿರುವ ಕೊಡುಗೆ ಎಂತಹದು ಎoಬ ವಿಷಯವನ್ನು ಸಮಾಜಕ್ಕೆ ಪಸರಿಸಲಿದ್ದು ದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆ ತಿದ್ದಲು ಪತ್ರಿಕಾ ರಂಗದ ತಮ್ಮ ಪಾತ್ರವನ್ನ ಇಂತಹ ಸಮ್ಮೇಳನಗಳಲ್ಲಿ ಚರ್ಚಿಸುವುದು ಶ್ಲಾಘನೀಯ ಎಂದು ತಿಳಿಸಿದರು.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ಅವರು ಮಾತನಾಡಿ, ಗೃಹ ಸಚಿವರು ಹಾಗೂ ಸಾಹೇ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರ ಆಶಯದಂತೆ ನಮ್ಮ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ವಿಭಿನ್ನವಾಗಿ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ. ರಾಜ್ಯಾದ್ಯಂತ ಸಮ್ಮೇಳನಕ್ಕೆ ಆಗಮಿಸುತ್ತಿರುವ ಪತ್ರಕರ್ತರ ಸಂಖ್ಯೆಯನ್ನು ಮೊದಲ ಬಾರಿಗೆ ಆನ್ಲೈನಲ್ಲಿ ನೋಂದಣಿ ಮಾಡಿರುವುದು ಡಿಜಿಟಲ್ ಮಾಧ್ಯಮಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ. ಇದನ್ನು ನೋಡಿದರೆ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ತಿಳಿಯಲಿದೆ.ಸಮ್ಮೇಳನದ ಭಾಗವಾಗಿ ನಡೆಯಲಿರುವ ವಿವಿಧ ಗೋಷ್ಠಿಗಳು ಮಹತ್ವದ್ದಾಗಿದ್ದು ಪ್ರಮುಖ ಸುದ್ದಿ ಸಂಸ್ಥೆಗಳಿoದ ಆಗಮಿಸುವ ಮುಖ್ಯಸ್ಥರ ಗಮನ ಸೆಳೆಯಲಿದೆ. ಇಂತಹ ಮಹತ್ವದ ಸಮ್ಮೇಳನಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾನಿಪ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿ, ಈಗಾಗಲೇ ತಿಳಿಸಿರುವಂತೆ ಜನವರಿ 18 ಮತ್ತು 19ರಂದು ಐತಿಹಾಸಿಕವಾದ ಬೃಹತ್ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು 18ರ ಬೆಳಿಗ್ಗೆ 8 ಗಂಟೆಗೆ ಟೌನ್ ಹಾಲ್ ವೃತ್ತದಿಂದ ಎಸ್. ಎಸ್. ಐ. ಟಿ ಮೈದಾನದವರೆಗೂ ನಡೆಯಲಿರುವ ವಿಶೇಷ ಪತ್ರಕರ್ತರ ಮೆರವಣಿಗೆಯಲ್ಲಿ ಪತ್ರಕರ್ತರ ಭಾಗವಹಿಸುವಿಕೆ, ಜನಪ್ರತಿನಿಧಿಗಳ ಚಾಲನೆ, ಜಿಲ್ಲೆಯ ವಿವಿಧ ಮಠಾಧೀಶರ ಸಾನಿಧ್ಯ ವಿಶೇಷವಾಗಿರುತ್ತದೆ ಎಂದು ತಿಳಿಸಿದರು.

ಅಂದು ನಡೆಯುವ ವೇದಿಕೆ ಕಾರ್ಯಕ್ರಮ ಬಹಳ ವಿಶೇಷವಾಗಿದ್ದು ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟನೆ ಮಾಡಲಿದ್ದು ಕೇಂದ್ರ ಮಂತ್ರಿ ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ. ಎನ್ ರಾಜಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ನಂತರ ಪತ್ರಕರ್ತರಿಗಾಗಿ ವಿವಿಧ ಗೋಷ್ಠಿಗಳು ನಡೆಯಲಿದ್ದು ಅಂದು ಸಂಜೆ ನಡೆಯಲಿರುವ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಲಿದೆ.
ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ಎರಡನೇ ದಿನವು ಮುಂದುವರೆಯಲಿದ್ದು ವಿವಿಧ ಗೋಷ್ಠಿಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಣಿಗೆ ಮುದ ನೀಡಲಿದ್ದು, ಸಮರೋಪ ಸಮಾರಂಭದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್. ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿ.ವೈ ರಾಘವೇಂದ್ರ ಸೇರಿದoತೆ ವಿವಿಧ ಪ್ರಮುಖರು ರಾಜಕಾರಣಿಗಳು ಭಾಗಿಯಾಗಲಿದ್ದಾರೆ.
ಅಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಲ್ಪತರು ನಾಡಿನಲ್ಲಿ ಸಾಧನೆಗೈದ ವಿವಿಧ ಸಾಧಕರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿoದ ‘ಕಲ್ಪತರು ರತ್ನ ಪ್ರಶಸ್ತಿ’ಯನ್ನು ವಿತರಣೆ ಮಾಡಲಾಗುವುದು. ಈ ಸಮಾರಂಭದಲ್ಲಿ ಕೆ.ಯು.ಡಬ್ಲ್ಯೂ.ಜೆ ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದೆ.ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಮಹಿಳಾ ಪದಾಧಿಕಾರಿಗಳು, ಮಹಿಳಾ ಸಂಘಟಕರು ಸೇರಿದಂತೆ ಸಾರ್ವಜನಿಕರಿಗೆ ಸಮ್ಮೇಳನಕ್ಕೆ ಮುಕ್ತ ಅವಕಾಶವಿದ್ದು ಈ ಸಮ್ಮೇಳನಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.