
ತುಮಕೂರು-ಪ್ರಸ್ತುತ ರಾಜಕಾರಣ ಎಂಬುದು ತುಘಲಕ್ ದರ್ಬಾರ್ ರೀತಿ ಆಗಿದೆ.ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು (5 ಗ್ಯಾರಂಟಿಗಳನ್ನು) ನೀಡಿ ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ. ಬೇಸಿಗೆ ಕಾಲ ಬರುವ ಮುಂಚಿತವಾಗಿಯೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ,ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಲೋಕ್‌ಶಕ್ತಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್ ಆರ್.ಎಸ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಪ್ರಸ್ತುತ ವಿದ್ಯಾಮಾನ್ಯಗಳು ಹಾಗೂ ಜನರು ಅನುಭವಿಸುತ್ತಿರುವ ಕಷ್ಟಗಳ ಕುರಿತಾಗಿ ಲೋಕ್‌ಶಕ್ತಿ ಪಾರ್ಟಿ ವತಿಯಿಂದ ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು,ಇತ್ತೀಚೆಗೆ ಮೈಕ್ರೋ ಫೈನಾನ್ಸ್ಗಳಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಇದ್ಯಾವುದರ ಬಗ್ಗೆ ಚಕಾರ ಎತ್ತದೇ ರಾಜ್ಯ ಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಆರೋಪಿಸಿದರಲ್ಲದೇ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.ರಾಜ್ಯ ಹೆದ್ದಾರಿ ಜಿಲ್ಲಾ ಹೆದ್ದಾರಿಗಳು ಸಂಪೂರ್ಣ ಹಾಳಾಗಿವೆ. ಯಾವುದೇ ಅಭಿವೃದ್ಧಿ ಕೆಲಸ ಕಾಮಗಾರಿಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ಸರಕಾರ ಇಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತನಗೆ ತಾನೇ ನಿರ್ಮಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದಲ್ಲೂ ಭಿನ್ನಮತ, ಅದೇ ರೀತಿ ವಿರೋಧ ಪಕ್ಷದಲ್ಲೂ ಭಿನ್ನಮತ, ವಿರೋಧ ಪಕ್ಷ ಸರ್ಕಾರವನ್ನು ಕಿವಿ ಹಿಂಡುವ ಕೆಲಸ ಮಾಡುವ ಬದಲು ಮಂಡಿ ಊರಿ ಕುಳಿತಿದೆ. ಇವರಿಬ್ಬರೂ, ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ರೈತರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ ಬಡವರ ಬಗ್ಗೆ ಇವರ್ಯಾರಿಗೂ ಕಾಳಜಿ ಇಲ್ಲ. ಬರೀ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಎಂದು ಖಂಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಯಾದ ಬಸವರಾಜಪ್ಪ ನೀರ್ಥಡಿ ಮಾತನಾಡುತ್ತಾ, ಕೇಂದ್ರ ಸರ್ಕಾರವು ಸಹ ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ.ನಮ್ಮ ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಸಂಗ್ರಹಿಸಿ, ನಮಗೆ ಸರಿಯಾದ ಅನುಪಾತದಲ್ಲಿ ಅನುದಾನವನ್ನು ಕೊಡುತ್ತಿಲ್ಲ.ಮುಖ್ಯವಾಗಿ ತುಮಕೂರು ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಎಕಮುಖ ಸಂಚಾರ ರೈಲ್ವೆ ಮಾರ್ಗ ಮಾಡುತ್ತಿದ್ದು, ಇದರ ಬದಲು ಜೋಡಿ ಮಾರ್ಗ ಮಾಡಬೇಕು ಎಂದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಆಗ್ರಪಡಿಸುತ್ತೇವೆ ಜೋಡಿ ಮಾರ್ಗಕ್ಕೆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಜೋಡಿಮಾರ್ಗ ಮಾಡಿದರೆ ಸರ್ಕಾರಕ್ಕೆ ಹಣ ಕಡಿಮೆ ಯಾಗುತ್ತದೆ. ಅದು ಬಿಟ್ಟು ಈಗ ಏಕ ಮುಖ ಮಾರ್ಗ ಮಾಡಿ, ಮುಂದೆ ಮತ್ತೆ ರೈತರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಾದರೆ, ಅದರ ಹಣ ದುಪ್ಪಟ್ಟು ಆಗುತ್ತದೆ. ಆದ್ದರಿಂದ, ಜೋಡಿ ಮಾರ್ಗಕ್ಕೆ, ಬೇಕಾದ ಜಮೀನನ್ನು ಸ್ವಾದೀನ ಪಡಿಸಿಕೊಂಡು, ಜೋಡಿ ಮಾರ್ಗ ಮಾಡಬೇಕು ಎಂದರು.

ನಮ್ಮದು ಒಂದು ರಾಜಕೀಯ ಪಕ್ಷವಾಗಿದ್ದು, ತುಮಕೂರು ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದ್ದು, ಮುಂದಿನ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹಾಕುತ್ತೇವೆ. ಸರ್ಕಾರ ಮೊಂಡುತನ ಬಿಟ್ಟು ಶೀಘ್ರವೇ ಚುನಾವಣೆ ನಡೆಸಬೇಕು, ಚುನಾವಣೆಗೆ ನಾವು ಸಿದ್ದರಿದ್ದೇವೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಲೋಕ್‌ಶಕ್ತಿ ಪಾರ್ಟಿಯ ತುಮಕೂರು ಜಿಲ್ಲಾಧ್ಯಕ್ಷ ರಂಗನಾಥ.ಟಿ, ಪುಷ್ಪಾಂತ,ಶಿವರಾಜ್, ಕಿರಣ್ ಕುಮಾರ್ ಡಿ.ಆರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.