ತುಮಕೂರು-ನವೆಂಬರ್ 29ರಂದು ಕುವೆಂಪು ಜನ್ಮದಿನಾಚರಣೆ ಆಚರಿಸುವ ಮೂಲಕ ಮೈತ್ರಿನ್ಯೂಸ್ ಪತ್ರಿಕಾಲಯವನ್ನು ಉದ್ಘಾಟಿಸಲಾಯಿತು.
ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪನವರು ಕುವೆಂಪು ಭಾವಚಿತ್ರಕ್ಕೆ ಹೂ ಹಾಕುವ ಮೂಲಕ ಪತ್ರಿಕಾಲಯವನ್ನು ಉದ್ಘಾಟಿಸಿ,ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದoದು ಪತ್ರಿಕಾಲಯ ಉದ್ಘಾಟಿಸುತ್ತಿರುವುದು ಮನುಜಪಥದತ್ತ ಸಾಗುವ ದ್ಯೋತಕವಾಗಿದೆ, ಕುವೆಂಪು ಅವರು ಜಾತಿ-ಮತಗಳನ್ನು ನೂಕಾಚೆ ಎಂದು ಹೇಳಿದವರು.ಕುವೆಂಪು ಅವರು ಎಂದೂ ಮೌಢ್ಯ-ಕಂದಚಾರಗಳಿಗೆ ಮೊರೆ ಹೋಗದೆ,ಅವರು ಬದುಕಿರುವ ಕಾಲದಲ್ಲಿ ಎಂದೂ ಗುಡಿ-ಗುಂಡಾರಗಳಿಗೆ ಭೇಟಿ ನೀಡದೆ,ವೈಚಾರಿಕತೆಯನ್ನು ತಮ್ಮ ಕೃತಿ-ಮತ್ತು ಬದುಕಿನಲ್ಲಿ ಅಳವಡಿಸಿಕೊಂಡoತಹವರು.ಅಂತಹ ಮನುಜಪಥ ಸಾರಿದ ಕವಿಯ ಜನ್ಮದಿನ ಪತ್ರಿಕಾಲಯವೊಂದು ಪ್ರಾರಂಭವಾಗುತ್ತಿರುವುದು ಮೌಢ್ಯಗಳನ್ನು ದೂರ ಮಾಡುವ ಸಂದೇಶವಾಗಿದೆ.ಇಲ್ಲಿ ಹೋಮ-ಹವನಗಳಾಗಲಿ, ಪೂಜೆ-ಪುನಸ್ಕಾರವಾಗಲಿ ಇಲ್ಲದೆ ಪುಸ್ತಕಗಳ ಮಧ್ಯದಲ್ಲಿ ಕುವೆಂಪುರವರ ಭಾವಚಿತ್ರವನ್ನಿಟ್ಟು ಪುಸ್ತಕಗಳು ಜಗತ್ತಿನ ಜ್ಞಾನದೀವ ಟಿಕೆಗಳು ಎಂಬುದನ್ನು ಇಲ್ಲಿ ತೋರಿಸಲಾಗಿದೆ.
ಮೈತ್ರಿನ್ಯೂಸ್ ಪತ್ರಿಕೆ ಸಂಪಾದಕರಾದ ವೆoಕಟಾಚಲ.ಹೆಚ್.ವಿ.ಅವರ ಪ್ರಗತಿಪರ ಚಿಂತನೆ ಗಳು ಅವರ ಪತ್ರಿಕೆ ಮೂಲಕ ಯುವ ಪೀಳಿಗೆಗೆ ತಲುಪಲಿ,ಮೌಢ್ಯ-ಕಂದಚಾರಗಳಿoದ ಯುವ ಜನರು ಹೊರಬರಲಿ ಎಂದು ಹೇಳಿದರು.
ಮಾಜಿ ಜಿಲ್ಲಾಪಂಚಾಯತಿ ಸದಸ್ಯರಾದ ಹೆಚ್.ಕೆಂಚಮಾರಯ್ಯನವರು ಮಾತನಾಡಿ, ನನ್ನ ಶಿಷ್ಯನೊಬ್ಬ ಪತ್ರಕರ್ತನಾಗಿ ಬೆಳದಿರುವುದು ಹೆಮ್ಮೆಯ ವಿಷಯ, ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಿ, ರಾಜ್ಯಮಟ್ಟದಲ್ಲಿ ಬೆಳಯಲಿ ಎಂದು ಹಾರೈಸಿದರು.
ಸ್ತ್ರೀ ರೋಗ ತಜ್ಞರಾದ ಡಾ||ಅರುಂಧತಿ ಡಿ. ಅವರು ಮಾತನಾಡಿ, ಇಂದು ಸಮಾಜದಲ್ಲಿ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಕುಸಿದಿರುವ ಕಾಲದಲ್ಲಿ ಪತ್ರಿಕೆಯನ್ನು ಪ್ರಾಮಾಣಿಕತೆಯಿಂದ ನಡೆಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಪತ್ರಕರ್ತರಾದ ಸಾ.ಚಿ.ರಾಜಕುಮಾರ್ ಮಾತನಾಡಿ, ಗೆಳೆಯ ವೆಂಕಟಾಚಲ ಮತ್ತು ನಾವೆಲ್ಲಾ ಹೋರಾಟದ ಹಿನ್ನಲೆಯಿಂದ ಬಂದವರು. ಸಮಾಜಕ್ಕೆ ಒಳಿತನ್ನು ಬಯಸಬೇಕೆಂದು ಪತ್ರಿಕಾರಂಗದಲ್ಲಿ ಸಾಗಿ ಬಂದವರಾಗಿದ್ದು, ವೈಚಾರಿಕ ಪ್ರಜ್ಞೆ ಇಟ್ಟುಕೊಂಡವರು ಪತ್ರಿಕಾ ಕ್ಷೇತ್ರದಲ್ಲಿದ್ದಾಗ ಸಮಾಜದ ಅಂಕು-ಡೊoಕುಗಳನ್ನು ಇಂತಿಷ್ಟಾದರೂ ತಿದ್ದಬಹುದು ಎಂದು ಹೇಳಿದರು.
ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ವಿಶೇಷಾಧಿಕಾರಿ ಡಾ.ನಾಗಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ತುಂಬಾ ಕಷ್ಟಕರ.ವೆಂಕಟಾಚಲರವರ ಸಾಹಸ ಒಂದು ತರಹ ಹಿಮಾಲಯಕ್ಕೆ ಹತ್ತಿದಂತಹ ಸಾಹಸ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರಕ ಆಸ್ಪತ್ರೆಯ ಡಾ.ಬಸವರಾಜು, ಆರೋಗ್ಯ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಡಾ||ಹೆಚ್.ವಿ.ರಂಗಸ್ವಾಮಿ, ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಡಾ.ವೈ.ಕೆ.ಬಾಲಕೃಷ್ಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ.ಟಿ.ವೆಂಕಟೇಶ್, ಸುವರ್ಣಪ್ರಗತಿ ಪತ್ರಿಕೆ ಸಂಪಾದಕರಾದ ಹೆಚ್.ಎಸ್.ಪರಮೇಶ್, ಚಿಂತಕ ಸಿ.ಕೆ.ಉಮಾಪತಿ, ನಾಗೇಂದ್ರಪ್ಪ, ಮಹಾಲಿಂಗಪ್ಪ ಕಗ್ಗಲಡು, ಪತ್ರಕರ್ತ ಬಾಲರಾಜು ಮುಂತಾದವರು ಉಪಸ್ಥಿತರಿದ್ದರು.