ತುಮಕೂರು:ಕಿರು ಧಾನ್ಯಗಳ ಬೆಳೆಯುವುದು,ಬಳಕೆ ಮಾಡುವುದು ಮತ್ತು ಅವುಗಳ ಮಾರುಕಟ್ಟೆ ಕುರಿತಂತೆ ರೈತರಿಗೆ ಮತ್ತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಎರಡು ದಿನಗಳ ಕಿರುಧಾನ್ಯ ಹಬ್ಬ ಮತ್ತು ವಿಚಾರ ಸಂಕಿರಣ ಏರ್ಪಡಿಸಿದ್ದು, ಸಾವಿರಾರು ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯ ಮಟ್ಟದ ಕಾರ್ಯಾಗಾರದ ಸಮಾರೋಪ ಭಾಷಣ ಮಾಡಿದ ಅವರು, ಅತಿ ಹೆಚ್ಚು ನಾರಿನ ಅಂಶ ಮತ್ತು ಪೋಷಕಾಂಶಗಳನ್ನು ಒಳಗೊoಡಿರುವ, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬೆಳೆಯ ಬಹುದಾದ ಸಿರಿಧಾನ್ಯಗಳನ್ನು ಬೆಳೆಯಲು ಜನರು ಮುಂದಾಗಬೇಕೆoದರು.
ಸಿರಿಧಾನ್ಯ ಬೆಳೆ ಬೆಳೆಯಲು ಉತ್ತೇಜಿಸುವ ಸಲುವಾಗಿ ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್ಗೆ 10,000 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.ರೈತರಿಗೆ ಮಾಹಿತಿ ನೀಡುವ ಸಲುವಾಗಿ 52 ಮಳಿಗೆಗಳನ್ನು ತೆರೆದು ವಿವಿಧ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.ಅಲ್ಲದೆ ರೈತರಿಗೋಸ್ಕರ ಆಹಾರ ತಜ್ಞರಾದ ಡಾ.ರಾಧಾ ಕಿರುಧಾನ್ಯಗಳ ಬಳಕೆ ಹಾಗೂ ಅವುಗಳಿಂದ ಆರೋಗ್ಯದ ಮೇಲಾಗುವ ಒಳ್ಳೆಯ ಪರಿಣಾಮಗಳ ಕುರಿತು ವಿವರಣೆ ನೀಡಿದರೆ, ಜಿಕೆವಿಕೆಯ ಡಾ.ರಮೇಶ್ ಅವರು,ಕಿರುಧಾನ್ಯ ಬೆಳೆಯಲು ಅಗತ್ಯವಿರುವ ಮಣ್ಣಿನ ಹಾವಾಗುಣ, ತಾಂತ್ರಿಕ ಅಂಶಗಳ ಕುರಿತು ಮಾತನಾಡಿದ್ದಾರೆ.ಜೀನಿ ಸಂಸ್ಥೆಯ ದಿಲೀಪ್ ಅವರು,ಕಿರುಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಹಾಗೂ ಮಾರುಕಟ್ಟೆಯ ಕುರಿತು ವಿವರ ನೀಡಿದರು.ಸೊಡೆಕ್ಸ್ ಸಂಸ್ಥೆಯಿoದ ಕಿರುಧಾನ್ಯಗಳ ಸಂಸ್ಕರಣೆ ಮತ್ತು ದಾಸ್ತಾನು ಕುರಿತು ಮಾಹಿತಿ ನೀಡಿದರು.ಪ್ರೊ.ಶಶಿಕಾಂತ ಅವರು ಸಿರಿಧಾನಗಳ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ಒಳ್ಳೆಯ ಪರಿಣಾ ಮಗಳ ಕುರಿತು ಮಾಹಿತಿ ಹಂಚಿಕೊoಡಿದ್ದಾರೆ.ರೈತರನ್ನು ತಲುಪುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಡಾ.ರಮೇಶ್ ತಿಳಿಸಿದರು.
ಶಿಕ್ಷಕರು, ಸಿರಿಧಾನ್ಯ ಬೆಳೆಗಾರರು ಹಾಗೂ ಸಿರಿಧಾನ್ಯ ಉದ್ದಿಮೆದಾರರಾದ ರಘು ಗೋಪಾಲನಹಳ್ಳಿ ಮಾತನಾಡಿ,ಸಿರಿಧಾನ್ಯ ಇಂದು ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಬೆಳೆಯುವ ಆಹಾರ ಬೆಳೆಯಾಗಿಲ್ಲ.ಸಿರಿಧಾನ್ಯ ಬೆಳೆಯುವುದು ಉದ್ಯಮವಾಗಿ ರೂಪಾಂತರಗೊಳ್ಳುತ್ತಿದೆ.ಹಾಗಾಗಿ ರೈತರು ಹೊಸ ತಂತ್ರಜ್ಞಾನದ ಮೂಲಕ ಸಿರಿಧಾನ್ಯ ಬೆಳೆಗಳನ್ನು ಸಂಸ್ಕರಿಸಿ,ಉತ್ಕೃಷ್ಟ ಗುಣಮಟ್ಟದ ಪ್ಯಾಕಿಂಗ್ ಮಾಡುವುದರಿಂದ ದೊಡ್ಡ ದೊಡ್ಡ ಕಂಪನಿಗಳ ಜೊತೆ ಪೈಪೋಟಿ ಮಾಡಬಹುದಾಗಿದೆ. ಸಿರಿಧಾನ್ಯಗಳನ್ನು ಕಾಳಿನ ರೂಪದಲ್ಲಿ ಮಾರಾಟ ಮಾಡುವುದಕ್ಕಿಂತ ಪೌಡರ್ ರೂಪದಲ್ಲಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸ ಬಹುದು.ಪೌಡರ್ ಮಾಡಲು ಬೇಕಾದ ಮಿಷನರಿ ಕೊಳ್ಳಲು ಸರಕಾರದಿಂದ ವಿವಿಧ ಹಂತದ ಸಹಾಯಧನ ದೊರೆಯಲಿದೆ.ರೈತರು ಇದನ್ನು ಬಳಸಿಕೊಂಡು, ಸಿರಿಧಾನ್ಯಗಳನ್ನು ತಾವು ಬಳಸಿ, ಇತರರಿಗೂ ಮಾರಾಟ ಮಾಡಿ ಲಾಭಗಳಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ಎರಡು ದಿನಗಳ ಸಿರಿಧಾನ್ಯ ಹಬ್ಬದಲ್ಲಿ ಮಳಿಗೆ ತೆರಿದಿದ್ದ ವಿವಿಧ ಉತ್ಪಾಧಕ ಸಂಸ್ಥೆಗಳಿಗೆ ಪ್ರಶಂಶನಾ ಪತ್ರ ನೀಡಿ ಗೌರವಿಸ ಲಾಯಿತು.ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ನಿವೃತ್ತ ನಿರ್ದೇಶಕರಾದ ಪ್ರೊ.ಶಶಿಕಾಂತ್,ರಘು,ಎಪಿಓ ಗಿರೀಶ್ ಮತ್ತಿತರರು
ಉಪಸ್ಥಿತರಿದ್ದರು.
————————–—ಕೆ.ಬಿ ಚಂದ್ರಚೂಡ