ತುಮಕೂರು:ಅಟವೀ ಶಿವಲಿಂಗ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವ-ಶಿವಯೋಗಿಗಳ ಪುಣ್ಯಸ್ಮರಣೆ:ಮಲ್ಲಿಕಾರ್ಜುನ ಶ್ರೀಗಳ ಚರಪಟ್ಟಾಭಿಷೇಕ

ತುಮಕೂರು:ತಾಲ್ಲೂಕಿನ ಕೋರಾ ಹೋಬಳಿ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ನವೆಂಬರ್ 10 ಮತ್ತು 11ರಂದು ಶ್ರೀ ಅಟವೀ ಮಹಾಸ್ವಾಮೀಜಿಗಳ 125ನೇ ಪುಣ್ಯಸ್ಮರಣೋತ್ಸವ,ಶ್ರೀ ಅಟವಿ ಶಿವಲಿಂಗ ಸ್ವಾಮಿಗಳ ಪೀಠಾರೋಹಣದ ರಜತ ಮಹೋತ್ಸವ, ಮಠದ ಉತ್ತರಾಧಿಕಾರಿಗಳಾದ ಶ್ರೀ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವ ಮತ್ತಿತರ ಕಾರ್ಯಕ್ರಮಗಳು ಏರ್ಪಾಟಾಗಿದೆ.

ಶ್ರೀ ಮಠದ ಅಧ್ಯಕ್ಷರಾದ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ ಶುಕ್ರವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ,ಅಟವಿ ಮಹಾಶಿವಯೋಗಿಗಳ ತಪಸ್ಸಿನ ಪ್ರಭಾವದಿಂದ ಈ ಕ್ಷೇತ್ರ ಶ್ರೀ ಅಟವೀಸ್ವಾಮಿ ಮಠವೆಂದು ಪ್ರಸಿದ್ಧವಾಗಿದೆ.ಆಗಿನಿಂದಲೂ ಭಕ್ತರ ಕಷ್ಟಕಾರ್ಪಣ್ಯದಲ್ಲಿ, ನೊಂದು ಬೆಂದವರಿಗೆ ಸುಖ ಶಾಂತಿ ನೆಮ್ಮದಿ ನೀಡುತ್ತಾ, ಪರಂಪರೆ ಉಳಿಸಿಕೊಂಡು ಮಠ ಬರುತ್ತಿದೆ. ಅಟವಿ ಮಹಾಶಿವಯೋಗಿಗಳು ಈ ಕ್ಷೇತ್ರದಲ್ಲಿ ತಪಸ್ಸು ಮಾಡಿ ಇಲ್ಲಿಯೇ ಲಿಂಗೈಕ್ಯರಾದರು. ಪೂಜ್ಯರ 125ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನವೆಂಬರ್ 10 ಮತ್ತು 11ರಂದು ತಾವು ಶ್ರೀ ಮಠದ ಐದನೇ ಪೀಠಾಧಿಪತಿಯಾಗಿ ಶ್ರೀನಿರಂಜನ ಪಟ್ಟಾಧಿಕಾರವನ್ನು ಮಾಡಿ ಶೂನ್ಯಪೀಠ ಅಲಂಕರಿಸಿ 25ವರ್ಷಗಳು ಸಂದಿವೆ. ಇದರ ಅಂಗವಾಗಿ ಮಠದ ಭಕ್ತರು ತಮ್ಮ ಪಟ್ಟಾಧಿಕಾರದ ರಜತ ಮಹೋತ್ಸವವನ್ನು 11ರಂದು ಆಯೋಜಿಸಿದ್ದಾರೆ. ಇದಲ್ಲದೆ ಅಂದು ಶ್ರೀ ಮಠದ ಉತ್ತರಾಧಿಕಾರಿಯಾದ ಅಟವಿ ಮಲ್ಲಿಕಾರ್ಜುನ ದೇವರ ಚರಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧ್ಯಕ್ಷರು, ಸಮಾಜದ ಪ್ರಮುಖರು, ಅಪಾರ ಸಂಖ್ಯೆಯ
ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ತುಮಕೂರು ನಗರ ವೀರಶೈವ ಸಮಾಜ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, 25 ವರ್ಷ ಕಾಲ ಅಟವೀ ಮಠದಲ್ಲಿ ಧಾರ್ಮಿಕ, ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಶ್ರೀ ಮಠದ ಪರಂಪರೆ, ಪಾವಿತ್ರತೆ ಬೆಳಗಿಸಿದ ಅಟವೀ ಶಿವಲಿಂಗ ಸ್ವಾಮೀಜಿಗಳ ಪಟ್ಟಾಧಿಕಾರ ರಜತ ಮಹೋತ್ಸವವನ್ನು ಭಕ್ತಿ ಸಡಗರದಿಂದ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಈ ಎರಡು ದಿನಗಳ ಕಾಲ ಕಾರ್ತಿಕ ಲಕ್ಷದೀಪೋತ್ಸವ, ರೊಟ್ಟಿ ಜಾತ್ರೆ ಅಲ್ಲದೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಮಠಗಳ ಪೂಜ್ಯರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಅಟವಿಮಲ್ಲಿಕಾರ್ಜುನದೇವರುಸ್ವಾಮೀಜಿ, ವೀರಶೈವ ಸಮಾಜದ ಕಾರ್ಯದರ್ಶಿ ಅತ್ತಿ ರೇಣುಕಾನಂದ, ಆರ್.ನಟರಾಜು, ಸಿ.ಮಹದೇವಪ್ಪ,ಜಗದೀಶ್ಚಂದ್ರ, ರಾಜೇಂದ್ರಕುಮಾರ್, ವಿಶ್ವನಾಥ್ ಅಪ್ಪಾಜಪ್ಪ,ಬಾಲಚಂದ್ರ, ರುದ್ರಪ್ರಸಾದ್, ಶ್ರೀಧರ್ ಹಿರೇತೊಟ್ಲುಕೆರೆ,
ಮಂಜುನಾಥ್ ಬದ್ನಾಳ್, ಶಿವಲಿಂಗಮ್ಮ, ಸುಮಪ್ರಸನ್ನ,ರುದ್ರಕುಮಾರ್ ಆರಾಧ್ಯ, ಟಿ.ಆರ್.ನಟರಾಜು, ಜಿ.ಆರ್.ದಯಾನಂದ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?