ತುಮಕೂರು-ಶಾಸಕ ಯತ್ನಾಳ್ ಲಿಂಗಾಯಿತರನ್ನು ಅವಮಾನಿಸುವ ಮೂಲಕ ವೈದಿಕರನ್ನು ಮೆಚ್ಚಿಸಲು ಹೊರಟಿದ್ದಾರೆ-ಡಾ.ಡಿ.ಎನ್. ಯೋಗೀಶ್ವರಪ್ಪ

ತುಮಕೂರು-ಹನ್ನೆರಡನೇ ಶತಮಾನದ ದಾರ್ಶನಿಕ ಬಸವಣ್ಣನವರ ಅಂತ್ಯದ ಬಗ್ಗೆ ಇನ್ನೂ ಖಚಿತವಾದ ಸಂಶೋಧನೆಗಳು ನಡೆಯದೇ ಇರುವ ಸಂದರ್ಭದಲ್ಲಿ ಶಾಸಕರಾದ ಯತ್ನಾಳರು ಬಸವಣ್ಣ ಹೊಳೆಗೆ ಹಾರಿ ಬಿದ್ದು ಸತ್ತುಹೋದ ಎಂದು ಹೇಳಿರುವುದು ಅವರ ಅಜ್ಞಾನದ ಪರಮಾವಧಿ.ಈ ಮೂಲಕ ಅವರು ಬಸವಾನುಯಾಯಿಗಳ ಭಾವನೆಗಳಿಗೆ ಧಕ್ಕೆ ತಂದಿರುವುದೇ ಅಲ್ಲದೆ ಲಿಂಗಾಯಿತರನ್ನು ಅವಮಾನಿಸುವ ಮೂಲಕ ವೈದಿಕರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.

ಅವರು ಬಸವಕೇಂದ್ರ,ಜಯದೇವ ವಿದ್ಯಾರ್ಥಿ ನಿಲಯಟ್ರಸ್ಟ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಮುರುಘರಾಜೇಂದ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ ಶರಣಸಂಗಮ ಮತ್ತು ವಿಜಯಕುಮಾರ ಕಮ್ಮಾರ್ ಅವರ ಶರಣ ಸಿದ್ಧಾಂತಗಳು ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಮಾಜಿಕ ಕಳಕಳಿ ಇದ್ದ ಬಸವಣ್ಣ ದುರ್ಬಲ ಮನಸ್ಸಿನವರಾಗಿದ್ದರೆ ಅವರು ಅಂದು ಉನ್ನತ ಅಧಿಕಾರದಲ್ಲಿದ್ದರು ಇಡೀ ರಾಜಪ್ರಭುತ್ವವನ್ನು ಎದುರು ಹಾಕಿಕೊಂಡು ಸಾಮಾನ್ಯ ಜನರ ಪರವಾಗಿ ಹೋರಾಟ ಮಾಡುತ್ತಿರಲಿಲ್ಲ. ಅವರ ಉದ್ದೇಶ ಸಮಸಮಾಜ ನಿರ್ಮಾಣ ಮಾಡುವುದು, ಸಮಪಾಲು, ಸಮಬಾಳು ಎಂಬುದೇ ಘೋಷಮಂತ್ರವಾಗಿತ್ತು ಎಂದರು.

ಉಪನ್ಯಾಸ ನೀಡಿದ ಸಾಹಿತಿಗಳಾದ ಡಾ. ಬಿ.ಸಿ.ಶೈಲಾನಾಗರಾಜ್ ಅವರು, ಕುಲಮೂಲ ಕಾಯಕ ಜೀವಿಗಳನ್ನು ಒಂದೆಡೆ ಸಂಘಟಿಸಿದ ಬಸವಣ್ಣ ಅವರ ಕಾಯಕಕ್ಕೆ ದೈವದ ಸ್ಪರ್ಶವನ್ನು ನೀಡಿ ದಲಿತ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ತುಂಬಲು ಪ್ರಯತ್ನಿಸಿದ ಐತಿಹಾಸಿಕ ಮಹಾಪುರುಷ ಎಂದು ಬಣ್ಣಿಸಿದರು.

ವಚನಗಳು ಆತ್ಮಸಾಕ್ಷಿಯ ನುಡಿಗಳು ಆಗಿದ್ದು ಕೆಲವೇ ಸಮುದಾಯಕ್ಕೆ ಮೀಸಲಾಗಿದ್ದ ಅಕ್ಷರ ಜ್ಞಾನವನ್ನು ಎಲ್ಲ ಸಮುದಾಯಗಳಿಗೆ ವಿಸ್ತರಿಸಿ ಅವರನ್ನೂ ಅಕ್ಷರವಂತರನ್ನಾಗಿ ಮಾಡಿದ ಬಸವಣ್ಣ ಸಾಕ್ಷರತಾ ಆಂದೋಲನದ ಜನಕನಾಗಿದ್ದಾನೆ. ಕುಲಕಸುಬನ್ನು ಮಾಡುತ್ತಿದ್ದ ಜನಾಂಗದ ಅನೇಕ ಶರಣರು ವಚನಗಳನ್ನು ರಚಿಸಿದ್ದು ಸುಮಾರು ಇಪ್ಪತ್ತೈದು ಸಾವಿರ ವಚನಗಳು ಲಭ್ಯವಿದೆ. 770 ವಚನಕಾರರಲ್ಲಿ 33 ವಚನಕಾರ್ತಿಯರೂ ಇರುವುದು ಬಸವಣ್ಣನವರ ಚಳುವಳಿಯ ಫಲಶ್ರುತಿಯಾಗಿದೆ ಎಂದರು.

ಕೃತಿಯ ಲೇಖಕರಾದ ವಿಜಯಕುಮಾರ ಕಮ್ಮಾರ್ ಅವರು ಮಾತನಾಡಿ, ದೇಹವನ್ನೇ ದೇವಾಲಯವಾಗಿ ರೂಪಿಸಿದ ಬಸವಣ್ಣ ಪ್ರತಿಯೊಬ್ಬರಿಗೂ ಇಷ್ಟಲಿಂಗಧಾರಣೆ ಮಾಡುವ ಮೂಲಕ ಶಿವಸಂಸ್ಕೃತಿಯ ನೇತಾರನೆನಿಸಿಕೊಂಡಿದ್ದಾನೆ. ಇಷ್ಟಲಿಂಗವೆoಬುದು ಸಮಾನತೆಯ ಸಂಕೇತವಾಗಿದ್ದು ಅದರ ಮೂಲಕ ದೇವರನ್ನು ಸಂಪರ್ಕಿಸಬಹುದು
ಎoದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಕೈಗಾರಿಕೋದ್ಯಮಿ ಡಿ.ವಿ.ಶಿವಾನಂದ್ ಹಾಜರಿದ್ದರು.ಶ್ರೀಮತಿ ಸಿದ್ದಗಂಗಮ್ಮ ಬಿ. ಸಿದ್ಧರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ರಾಜೇಶ್ವರಿ ಶಿವಾನಂದ್ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್ ಸ್ವಾಗತಿಸಿದರು. ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು. ಬಸವಕೇoದ್ರದ ಕಾರ್ಯದರ್ಶಿ ಚಂದ್ರಶೇಖರ್ ನಿರೂಪಿಸಿದರು.

Leave a Reply

Your email address will not be published. Required fields are marked *

× How can I help you?