ತುಮಕೂರು:ದಸರಾ ಮುಗಿದು ತಿಂಗಳಾದರೂ ಸಂಭಾವನೆ ಬಿಡುಗಡೆ ಮಾಡದ ಜಿಲ್ಲಾಡಳಿತ-ಪ್ರತಿಭಟನೆಯ ಎಚ್ಚರಿಕೆ ನೀಡಿದ ವೀರೇಶ್ ಪ್ರಸಾದ್

ತುಮಕೂರು:ಇದೇ ಪ್ರಥಮ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ದಸರಾ ಉತ್ಸವದಲ್ಲಿ ಭಾಗವಹಿಸಿದ್ದ ಸ್ಥಳೀಯ ಕಲಾವಿದರು ಹಾಗೂ ಕಲಾ ತಂಡಗಳಿಗೆ ಈವರೆಗೂ ಸಂಭಾವನೆಯನ್ನೇ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾಒಕ್ಕೂಟದ ಅಧ್ಯಕ್ಷ ವೀರೇಶ್ ಪ್ರಸಾದ್ ತಿಳಿಸಿದ್ದಾರೆ.

ದಸರಾ ಆಚರಣೆ ಅದ್ದೂರಿಯಾಗಿ ನಡೆಯಬೇಕು, ಯಾವುದೇ ಕಾರಣಕ್ಕೂ ಕೊರತೆ ಯಾಗಬಾರದು, ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಡಳಿತ ಹೇಳಿತ್ತು.

ಜಿಲ್ಲಾಡಳಿತದ ಕಾರ್ಯಕ್ರಮವಾದ ಕಾರಣ ಕಲಾವಿದರು ಹಾಗೂ ಕಲಾತಂಡಗಳು ಸಹ ಉತ್ಸಾಹದಿಂದ ಭಾಗವಹಿಸಿದ್ದವು. ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ದಸರಾ ಮುಗಿದು ಒಂದು ತಿಂಗಳು ಕಳೆದರೂ ಸಹ ಕಲಾವಿದರಿಗೆ ಸಂಭಾವನೆ ನೀಡಲು ಜಿಲ್ಲಾಡಳಿತ ಮನಸ್ಸು ಮಾಡಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ಯುವ ದಸರಾದಲ್ಲಿ ಭಾಗವಹಿಸಿದ್ದ 16 ತಂಡಗಳ ಸಂಭಾವನೆ 5 ಲಕ್ಷ, ಧಾರ್ಮಿಕ ವಿಧಿ ವಿಧಾನದ 27 ತಂಡಗಳಿಗೆ 5 ಲಕ್ಷ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 25 ತಂಡಗಳಿಗೆ 5 ಲಕ್ಷ, ಮುಖ್ಯ ವೇದಿಕೆಯಲ್ಲಿ ಪ್ರದರ್ಶನ ನೀಡಿದ ನಾಲ್ಕು ತಂಡಗಳಿಗೆ 2 ಲಕ್ಷ ಸೇರಿದಂತೆ ಒಟ್ಟು 17 ಲಕ್ಷ ರೂ. ಸಂಭಾವನೆಯನ್ನು ಜಿಲ್ಲಾಡಳಿತ ನೀಡಬೇಕಿದೆ.

ಭಾಗವಹಿಸಿದ್ದ ಕಲಾವಿದರಿಗೆ ಕನಿಷ್ಠ ಪ್ರಶಸ್ತಿ ಪತ್ರವನ್ನು ನೀಡಿಲ್ಲ. ಸುಮಾರು 1,550ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ಸಂಭಾವನೆ ಪಡೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟರು, ಇತರೆ ಕಲಾವಿದರ ತಂಡಕ್ಕೆ 15 ಲಕ್ಷ ಸಂಭಾವನೆಯನ್ನು ಈಗಾಗಲೇ ಜಿಲ್ಲಾಡಳಿತ ನೀಡಿದೆ. ಆದರೆ ಗ್ರಾಮೀಣ ಭಾಗದ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಕೂಡ ಕಲಾವಿದರ ಸಂಭಾವನೆ ಬಿಡುಗಡೆ ಮಾಡಲು ಗಮನ ಹರಿಸಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ತಕ್ಷಣ ಸಂಭಾವನೆ ನೀಡದಿದ್ದರೆ ಕಲಾವಿದರ ಜೊತೆ ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

× How can I help you?