ತುಮಕೂರು:ಒಂದೇ ದಿನದಲ್ಲಿ ಉದ್ಯೋಗ ನೀಡಿ ಅನುಕಂಪ ತೋರಿದ ಜಿಲ್ಲಾಧಿಕಾರಿ ಶುಭಕಲ್ಯಾಣ್-ವ್ಯಾಪಕ ಪ್ರಶಂಶೆ

ತುಮಕೂರು:ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ವಾಹನ ಚಾಲಕನ ಪತ್ನಿಗೆ ಸರ್ಕಾರದಿಂದ ಆದೇಶ ಬಂದ ಕ್ಷಣದಲ್ಲೇ ಅನುಕಂಪದ ಉದ್ಯೋಗ ನೀಡಿ ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ಮಾನವೀಯತೆ ಮೆರೆದ ಘಟನೆ ಮಂಗಳವಾರ ಸಂಜೆ ನಡೆಯಿತು.

ತುರುವೇಕೆರೆ ತಾಲೂಕು ಡಿ.ಕಲ್ಕೆರೆಯ ಪರಮೇಶ್ವರ್ ಅಗ್ನಿಶಾಮಕ ವಾಹನದ ಚಾಲಕರಾಗಿ ಉದ್ಯೋಗದಲ್ಲಿದ್ದರು. ಕರ್ತವ್ಯ ಮುಗಿಸಿ ಮನೆಗೆ ಬರುವಾಗ 2023ರಲ್ಲಿ ಅಪಘಾತದಲ್ಲಿ ಮೃತರಾಗಿದ್ದರು. ಈ ಪ್ರಕರಣ ಇಲಾಖೆ ಹಂತದಲ್ಲಿ ಇತ್ಯರ್ಥವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಂಗಳವಾರ ಆದೇಶವಾಗಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಮೃತ ಪರಮೇಶ್ವರ್ ಅವರ ಪತ್ನಿ ರೋಹಿಣಿ ಅವರನ್ನು ಕಚೇರಿಗೆ ಕರೆದು ಮಾತನಾಡಿಸಿದರು.

ಮೂರು ವರ್ಷದ ತಮ್ಮ ಮಗು ಹಾಗೂ ಅತ್ತೆಯೊಂದಿಗೆ ಬoದಿದ್ದ ರೋಹಿಣಿಯವರನ್ನು ತಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಕುಣಿಗಲ್ ತಾಲೂಕಿನಲ್ಲಿ ಡಿ.ವರ್ಗದ ನೌಕರರಾಗಿ ರೋಹಿಣಿಯವರಿಗೆ ನೇಮಕಾತಿ ಆದೇಶ ಪತ್ರ ನೀಡಿದರು.

ನೇಮಕಾತಿ ಆದೇಶ ಸಿದ್ಧವಾಗುವವರೆಗೆ ಅರ್ಧ ತಾಸು ತಮ್ಮ ಕಚೇರಿಯಲ್ಲಿ ಪಕ್ಕದಲ್ಲೇ ಕುರ್ಚಿಯಲ್ಲಿ ಕೂರಿಸಿಕೊಂಡ ಜಿಲ್ಲಾಧಿಕಾರಿಗಳು ಮಗುವಿಗೆ ಬಿಸ್ಕತ್ತು, ಚಾಕ್ಲೆಟ್, ನೀರು ತರಿಸಿ ಕೊಟ್ಟಿದ್ದು ಅವರ ಅಂತಃಕರಣದ ಭಾವವನ್ನು ತೋರಿತು.

ಜಿಲ್ಲಾಧಿಕಾರಿಗಳ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದೆ.

———–ಚಂದ್ರಚೂಡ

Leave a Reply

Your email address will not be published. Required fields are marked *

× How can I help you?