ತುಮಕೂರು-ಅಹಿoಸಾತ್ಮಕ ಹೋರಾಟದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹೊಸ ತಿರುವನ್ನು ನೀಡಿದ ಮಹಾತ್ಮ ಗಾಂಧೀಜಿ ಸತ್ಯ ಅಹಿಂಸೆ ಪ್ರಾಮಾಣಿಕತೆಯ ಪ್ರತೀಕವಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.
ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçಯವರ ಜಯಂತಿಯಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿದರು.
ಇಬ್ಬರೂ ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯರಾಗಿದ್ದರು. ಶಾಸ್ತ್ರೀಜಿಯವರು ತಮ್ಮ ಪ್ರಧಾನಮಂತ್ರಿ ಅವಧಿಯಲ್ಲಿ ಜೈ ಕಿಸಾನ್ ಎಂದು ಹೇಳುವ ಮೂಲಕ ಭಾರತೀಯ ರೈತರಿಗೆ ಆತ್ಮವಿಶ್ವಾಸ ತುಂಬಿ ದೇಶವನ್ನು ಆಹಾರ ಸ್ವಾಯತ್ತತೆಯನ್ನು ಸಾಧಿಸುವಂತೆ ಮಾಡಿದ ಶ್ರೇಷ್ಠ ನೇತಾರ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ, ಕೇವಲ ಅಸಹಕಾರ, ಅವಿಧೇಯತಾ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳನ್ನು ಅಹಿಂಸಾ ಮಾರ್ಗದ ಮೂಲಕ ಸಂಘಟಿಸಿ ಯಾವುದೇ ತೆರನಾದ ರಕ್ತಪಾತವಿಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಮಾಡಿದ ಸಂಘಟನಾ ಚತುರ ಮಹಾತ್ಮ ಗಾಂಧೀಜಿ. ಅವರು ವ್ಯಕ್ತಿಯಲ್ಲ ಅದೊಂದು ಶಕ್ತಿ. ಇವರು ಕೇವಲ ಕೆಲವರಿಗೇ ಮೀಸಲಾಗಿದ್ದ ಹೋರಾಟದಲ್ಲಿ ಜನಸಾಮಾನ್ಯರೂ ಪಾಲ್ಗೊಳ್ಳುವಂತೆ ಮಾಡಿದ ಶಾಂತಿದೂತ ಗಾಂಧೀಜಿ ಎಂದು ಬಣ್ಣಿಸಿ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆಯದೇ ಇರುವುದು ವಿಷಾದನೀಯ ಎಂದರು.
ತುಮಕೂರಿಗೆ ಎರಡು ಬಾರಿ ಭೇಟಿ ನೀಡಿದ್ದ ಗಾಂಧೀಜಿ ಒಮ್ಮ ತಂಗಿದ್ದ ಕೊಠಡಿಯನ್ನು ಸರ್ಕಾರ ಸ್ಮಾರಕ ಮಾಡಿದ್ದರೂ ಅದರ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ತಿಪಟೂರು ಸ್ಮಾರಕವೂ ಇದೇ ಪರಿಸ್ಥಿತಿಯಲ್ಲಿದೆ. ಇಂತಹ ಸ್ಮಾರಕಗಳನ್ನು ಜನರಿಗೆ ಪರಿಚಯಿಸಿ ಆಧುನಿಕ ಕಾಲಕ್ಕೆ ತಕ್ಕಂತೆ ರೂಪಿಸಿ ಅದು ಸದಾ ಚಟುವಟಿಕೆಯಿಂದಿರಬೇಕು. ಇದಕ್ಕಾಗಿ ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಬೇಕು ಎಂದರಲ್ಲದೆ, ಇತ್ತೀಚೆಗೆ ಗಾಂಧಿ ಹೆಸರಿನ ರಸ್ತೆಗಳಲ್ಲಿ ಗಾಂಧಿ ವಿರೋಧಿಸಿದ್ದ ಅಂಶಗಳೇ ಹೆಚ್ಚಾಗುತ್ತಿರುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಇವೆಲ್ಲವುಗಳನ್ನೂ ಮಾಡಿದರೆ ನಾವು ಗಾಂಧೀಜಿಗೆ ಕೊಟ್ಟ ಬಹುದೊಡ್ಡ ಉಡುಗೊರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜ್, ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ, ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಬೆಸ್ಟೆಕ್ಸ್ ರಾಮರಾಜು, ಡಾ. ಓ.ನರಸಿಂಹಮೂರ್ತಿ ಇನ್ನಿತರರು ಭಾಗವಹಿಸಿದ್ದರು.