ತುಮಕೂರು-ಸಿದ್ಧಾರ್ಥ ಬಿ ಎಡ್ ಕಾಲೇಜಿನಲ್ಲಿ ‘ಪುರಾತನ ವಸ್ತುಗಳ ಪ್ರದರ್ಶನ-ಪುರಾತನ ವಸ್ತುಗಳ’ವೀಕ್ಷಿಸಿ ಹರ್ಷಗೊಂಡ ವಿದ್ಯಾರ್ಥಿಗಳು

ತುಮಕೂರು-ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ದಿನದ ಪುರಾತನ ವಸ್ತುಗಳ ಪರಿಚಯ ಮತ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ, ಮಾನವಿಕ ಮತ್ತು ವಿಜ್ಞಾನ ಸಂಘ ಸಂಯುಕ್ತವಾಗಿ ಆಯೋಜಿಸಿದ್ದವು.

ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್.ಸಿದ್ದರಾಜು ಅವರು, ಇತಿಹಾಸವನ್ನು ಇಂದಿನ ತಂತ್ರಜ್ಞಾನಕ್ಕೆ ಹೋಲಿಸಿ ಇತಿಹಾಸದಲ್ಲಾಗಿರುವಂತಹ ಬದಲಾವಣೆ ಸಮಾಜದ
ಅಭಿವೃದ್ದೀಯನ್ನು ಪ್ರತಿಬಿಂಬಿಸುತ್ತವೆ.ಅನೇಕ ಪುರಾತನ ವಸ್ತುಗಳು ಇಂದಿನ ಪ್ರಗತಿಯ ದ್ಯೋತಕ ಎಂದರು.

ಸಮಾಜ ವಿಜ್ಞಾನದ ಉಪನ್ಯಾಸಕಿ ಸಿ.ಎಸ್. ಕನ್ಯಾಕುಮಾರಿ ಮಾತನಾಡಿ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ‘ಎಂಬ ಮಾತನ್ನು ಅರಿತು ಇಂದಿನ ವಿದ್ಯಾರ್ಥಿಗಳು ಇತಿಹಾಸದಲ್ಲಿ ಬಳಸಿರುವಂತಹ ವಸ್ತುಗಳು ಹಾಗೂ ಸಾಧನ ಪರಿಕರಗಳನ್ನು ಬಳಸಿಕೊಂಡು ಮುಂದೆ ಇನ್ನಷ್ಟು ಅಭಿವೃದ್ದಿಪಡಿಸುವ ಕಲೆಗಾರಿಕೆ ಮರೆಯಬಾರದು ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಕಾಲೇಜಿನ ಉಪನ್ಯಾಸಕರುಗಳಾದ ಡಾ. ಎನ್.ಎನ್.ಮಾರುತಿ, ಕೆ.ಆರ್. ಲ ಲಿತ, ಜಿ.ಹೇಮಲತಾ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಗಮನ ಸೆಳೆದ ವಸ್ತುಪ್ರದರ್ಶನ:

ಪ್ಲಾಸ್ಟಿಕ್, ಪೈಬರ್ ಭರಾಟೆ ನಡುವೆ ಪ್ರಾಚೀನ ವಸ್ತುಗಳು ಮರೆಯಾಗಿವೆ. ಮನೆಗಳಲ್ಲಿ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಮೂಲೆಗುಂಪಾಗಿ ಅತ್ಯಾಧುನಿಕ ಸಲಕರಣೆಗಳು ಅಡುಗೆ ಕೋಣೆ ಸೇರಿಕೊಂಡಿವೆ. ಆದರೆ ಈ ಹಿಂದೆ ಬಳಸುತ್ತಿದ್ದ ಅಪರೂಪದ ದಿನಬಳಕೆ ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇತರೆ ಪರಿಕರಗಳನ್ನು ಸಂಗ್ರಹಿಸಿದ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅವುಗಳ ಪ್ರದರ್ಶನ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.

ಕಾಲೇಜಿನ ಪ್ರಾಂಗಣದಲ್ಲಿ ಪುರಾತನ ಕಾಲದಲ್ಲಿ ಉಪಯೋಗಿಸಿರುವ ವಸ್ತ್ರಗಳು ಮತ್ತು ಚಿನ್ನ, ಬೆಳ್ಳಿ , ನಾಣ್ಯ, ಕಬ್ಬಿಣದ ಸಾಮಗ್ರಿಗಳು ಹೀಗೆ ಹಲವಾರು ರೀತಿಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳ ಪ್ರದರ್ಶನ ಮತ್ತು ಪರಿಚಯ ಮಾಡಿಕೊಡಲಾಯಿತು.

ಸಿಗಂಗಾ,ಎಸ್‌ವಿಎಸ್,ರಾಜೀವ್ ಗಾಂಧಿ, ಕೆಸಿಎಫ್, ಇಂದಿರಾ, ಕೃಷ್ಣ, ನಯನ ಕಾಲೇಜುಗಳ ಬಿಇಡಿ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಾತ್ಯಕ್ಷತೆಗಳ ಮೂಲಕ ವಿಚಾರ ವಿನಿಮಯ ಮಾಡಿಕೊಂಡರು.

ಆಧುನಿಕತೆ ಬೆಳೆದಂತೆ ನಮ್ಮ ಜೀವನ ಶೈಲಿ ಕೂಡ ಬದಲಾಗುತ್ತಿದೆ. ಮಾನವ ತನ್ನ ಜೀವನ ಕ್ರಮಕ್ಕೆ ಅನೂಕೂಲವಾಗುವಂತಹ ವ್ಯವಸ್ಥೆಗೆ ಮಾರು ಹೋಗುತ್ತಿದ್ದಾನೆ.ಅದರಂತೆ ನಮ್ಮ ಪೂರ್ವಜರು ಮನೆ, ಜಮೀನು ಕೆಲಸಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಿದ್ದ
ಪುರಾತನ ಹಾಗೂ ಪ್ರಾಚೀನ ವಸ್ತುಗಳು ಇದೀಗ ಸಂಪೂರ್ಣ ಮರೆಯಾಗಿದೆ ಎಂದು ತಮ್ಮೂರಿನ ನೆನಪುಗಳನ್ನು ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಹರ್ಷಿತಾ ಅವರ ಮಾತಾಗಿತ್ತು.

ಪುರಾತನ ವಸ್ತುಗಳ ಬದಲಾಗಿ ಇದೀಗ ತರೆವಾರು ಪ್ಲಾಸ್ಟಿಕ್, ಪೈಬರ್,ಗಾಜಿನ ವಸ್ತುಗಳು ಮನೆಗಳಲ್ಲಿ ರಾರಾಜಿಸುತ್ತಿವೆ. ಅತಿ ಕಡಿಮೆಬೆಲೆಗೆ ಈ ವಸ್ತುಗಳು ಸಿಗುವುದು ಮಾತ್ರವಲ್ಲದೆ ಹೆಚ್ಚು ಆಕರ್ಷಿತವಾಗುವ ಕಾರಣ ಜನ ಕೂಡ ಮಾರುಹೋಗುತ್ತಿದ್ದಾರೆ. ಈ ಹಿಂದೆ ಬಳಸುತ್ತಿದ್ದ ಪುರಾತನ ವಸ್ತುಗಳು ಇದೀಗ ನೋಡುವುದಕ್ಕೂ ಸಿಗುವುದು ಕಷ್ಟವಾಗಿದೆ ಎಂದು ಉಪನ್ಯಾಸಕರಾದ ಡಾ.ಮಾರುತಿ ಟಿ.ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮನೆಯಲ್ಲಿ ಹಳೆ ಕಾಲದ ಹಿತ್ತಾಳೆ, ಕಂಚಿನ ಪಾತ್ರೆ, ಪಿಂಗಾಣಿ ಭರಣಿ,ಕಂಚೀನ ದೀಪ, ಮಹಿಳೆಯರ ಅಲಂಕಾರಿಕಾ ವಸ್ತುಗಳ ಸಂಗ್ರಹದ ಮರದ ಪೆಟ್ಟಿಗೆ, ರೆಡೀಯೋ, ಸುಗಂಧ ದೃವ್ಯ ಸಿಂಪಡನೆಯ ವಸ್ತುಗಳು, ಹಳೆಕಾಲದ ತೊಟ್ಟಿಲು, ನೇಗಿಲು, ಚರಕ, ಬುಟ್ಟಿ,ಭತ್ತ ಕುಟ್ಟುವ ಕಲ್ಲು, ಒನಕೆ ಸೇರಿದಂತೆ ಅಪರೂಪದ ವಸ್ತುಗಳು ಪ್ರದರ್ಶನದಲ್ಲಿದ್ದವು.

ಇಂದು ಇವೆಲ್ಲವೂ ಎಷ್ಟೇ ದುಡ್ಡುಕೊಟ್ಟರು ದೊರೆಯುವುದಿಲ್ಲ. ಆರೋಗ್ಯಕರವಾಗಿದ್ದ ಈ ವಸ್ತುಗಳ ಬದಲಾಗಿ ಪ್ಲಾಸ್ಟಿಕ್ ವಸ್ತುಗಳು ಬಂದಿದೆ ಎಂಬ ಮಾತಿನ ಪ್ರತಿಧ್ವನಿ ಪ್ರದರ್ಶನದಲ್ಲಿ ಕೇಳಿಬಂದಿತು.

ವಿದ್ಯಾರ್ಥಿಗಳು ಮುಗ್ಗಿ ಬಿದ್ದು ಅಪರೂಪದ ವಸ್ತುಗಳ ವೀಕ್ಷಣೆ ನಡೆಸಿದರು.

Leave a Reply

Your email address will not be published. Required fields are marked *

× How can I help you?