ತುಮಕೂರು:ಪೈಪ್‌ಲೈನ್ ಮೂಲಕ ಕುಣಿಗಲ್,ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮಿತ್ರ ಪಕ್ಷಗಳ ಹೋರಾಟ ಮುಂದುವರೆದಿದ್ದು, ಸೋಮವಾರ ಎರಡೂ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು ಈ ಧರಣಿಗೆ ತುಮಕೂರು ಜಿಲ್ಲಾ ವಕೀಲರ ಸಂಘದ ಸದಸ್ಯರುಗಳು ಸಾಥ್ ನೀಡಿದರು.
ಶನಿವಾರ ಗುಬ್ಬಿ ತಾಲ್ಲೂಕು ಸಾಗರನಹಳ್ಳಿ ಹೇಮಾವತಿ ನಾಲಾ ಗೇಟ್ ಬಳಿಯಿಂದ ತುಮಕೂರು ವರೆಗೆ ವಿವಿಧ ಮಠಾಧೀಶರು, ಶಾಸಕರು,ಮಾಜಿ ಶಾಸಕರು,ಎರಡೂ ಪಕ್ಷಗಳ ಮುಖಂಡರು,ರೈತರು ಪಾದಯಾತ್ರೆ ನಡೆಸಿದ್ದರು. ಈಗ ಧರಣಿ ಸತ್ಯಾಗ್ರಹ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದಾರೆ.ನಗರದ ವಕೀಲರು ಹೇಮಾವತಿ ನೀರಿನ ಹೋರಾಟ ಬೆಂಬಲಿಸಿ ಸೋಮವಾರ ಜಿಲ್ಲಾ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಬಂದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರಯ್ಯ ಮಾತನಾಡಿ, ಜಿಲ್ಲೆಯ ರೈತರು ಮತ್ತು ನಾಗರೀಕರ ಉಸಿರಾಗಿರುವ ಹೇಮಾವತಿ ನೀರನ್ನು ಮಾಗಡಿ,ರಾಮನಗರಕ್ಕೆ ತೆಗೆದುಕೊಂಡು ಹೋದರೆ ತುಮಕೂರು ನಗರದ 5 ಲಕ್ಷ ಜನ ಗುಳೆ ಹೋಗಬೇಕಾದ ಪ್ರಸಂಗ ಬರುತ್ತದೆ,ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಅವರ ಜೀವನ ಬೀದಿಪಾಲಾಗಲಿದೆ. ಆದ್ದರಿಂದ ತಕ್ಷಣವೇ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕು, ಉಪಮುಖ್ಯಮಂತ್ರಿಗಳು ತಮ್ಮ ಪ್ರತಿಷ್ಠೆಯನ್ನು ಪಕ್ಕಕ್ಕಿರಿಸಿ ರೈತರ ಹಿತವನ್ನು ಕಾಯಬೇಕು,ತುಮಕೂರು ಜಿಲ್ಲೆಯ ಇಬ್ಬರು ಸಚಿವರು ಎಲ್ಲಾ ಶಾಸಕರು ಒಂದಾಗಿ ಹೋರಾಟ ಮಾಡಿ ಸದರಿ ಕಾಮಗಾರಿಯನ್ನು ನಿಲ್ಲಿಸಿ ರೈತರ ಕಷ್ಟಕ್ಕೆ ಧಾವಿಸಬೇಕೆಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಎಸ್.ಮೋಹನ್, ಶಿವಕುಮಾರಸ್ವಾಮಿ, ಪಿ.ಎಸ್.ಸಂದೀಪ್,ಮoಜುಳ.ಹೆಚ್.ಎನ್,ಬಿಜೆಪಿ ವಕೀಲ ಪ್ರಕೋಷ್ಟದ ಡಿ.ಸಿ.ಹಿಮಾನಂದ್, ಸಿ.ಎಸ್.ಕುಮಾರಸ್ವಾಮಿ,ರಮೇಶ್,ಹಾಗೂ ಹಲವು ವಕೀಲರು ಹೋರಾಟದಲ್ಲಿ ಭಾಗವಹಿಸಿ, ಹೇಮಾವತಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕೂಡಲೇ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿಯನ್ನು ಸ್ಥಗಿತಗೊಳಿಸಿಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ,ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನ ವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಜಿಲ್ಲೆಯ ಜನರು, ರೈತರಿಗೆ ದ್ರೋಹ ಮಾಡಿ ನಮ್ಮ ನೀರಿನ ಹಕ್ಕನ್ನು ಕಸಿಯುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಲಿ ಇರುವ ನಾಲೆಯ ಮೂಲಕ ಕುಣಿಗಲ್‌ಗೆ ಹೇಮಾವತಿ ನೀರು ತೆಗೆದುಕೊಂಡುಹೋಗಲು ಅಭ್ಯಂತರವಿಲ್ಲ, ಆದರೆ, ನೀರನ್ನು ಕಬಳಿಸುವ ಹುನ್ನಾರದ ಪೈಪ್‌ಲೈನ್ ಮೂಲಕ ನೀರನ್ನು ತೆಗೆದುಕೊಂಡುಹೋಗಲು ಬಿಡುವುದಿಲ್ಲ,ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಕೈ ಬಿಡುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
———————ಕೆ.ಬಿ ಚಂದ್ರಚೂಡ