ತುಮಕೂರು-ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು.
ದೂರದ ಆಂಧ್ರ ಗಡಿ ಭಾಗದ, ಮಧುಗಿರಿ ತಾಲ್ಲೂಕಿನ ಮತ್ತು ಪಾವಗಡ ತಾಲ್ಲೂಕಿನ ಕುಷ್ಠರೋಗದಿಂದ ಮುಕ್ತರಾಗಿ, ಅಂಗವಿಕಲತೆಯಿಂದ ತಮ್ಮ ಜೀವನವನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ನೆರವಿನಿಂದ ನಡೆಸಿಕೊಂಡು ಬರುತ್ತಿರುವ ನೂರಾರು ಮಂದಿಗೆ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ನೂತನ ವಸ್ತ್ರಗಳು, ಸೀರೆ, ಪಂಚೆ, ಟವೆಲ್, ಅಕ್ಕಿ ಇತ್ಯಾದಿಗಳನ್ನು ನೀಡಲಾಯಿತು.
ಪ್ರಾಸ್ತಾವಿಕ ನುಡಿಯನ್ನು ನುಡಿದ ಪರಮಪೂಜ್ಯ ಸ್ವಾಮಿ ಜಪಾನಂದಜೀ,ಮಹಾತ್ಮ ಗಾಂಧೀಜಿಯವರೇ ಬಯಸಿದಂತಹ ಕುಷ್ಠರೋಗಿಗಳ ಸೇವೆಯನ್ನು ನಿರಂತರವಾಗಿ ನಡೆಸುತ್ತಿರುವ ನಮ್ಮ ಈ ಸಂಸ್ಥೆ ಇಂದು ಗಡಿಭಾಗದ ಹಾಗೂ ಪಾವಗಡ, ಮಧುಗಿರಿ ತಾಲ್ಲೂಕಿನ ನೂರಾರು ರೋಗಿಗಳಿಗೆ ದಸರಾ ಹಬ್ಬದ ಪ್ರಯುಕ್ತ ನೂತನ ವಸ್ತ್ರಗಳು ಇತ್ಯಾದಿಗಳನ್ನು ನೀಡುತ್ತಾ ಅವರಿಗೆ ಕಾಲಕಾಲಕ್ಕೆ ಬೇಕಾಗುವ ಔಷಧೋಪಚಾರಗಳನ್ನು, ಪಾದರಕ್ಷೆಗಳನ್ನು, ವಾಕರ್‍ಗಳನ್ನು, ವಾಕಿಂಗ್ ಸ್ಟಿಕ್‍ಗಳನ್ನು ನೀಡುತ್ತಾ ಬರುತ್ತಿದೆ .
ಈ ಕಾರ್ಯ ನಿರಂತರವಾಗಿ ಕಳೆದ ಮೂರು ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ದಂಡಾಧಿಕಾರಿಗಳಾಗಿರುವ ಮಾದೇಶರವರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ತಂದಿದೆ.
ಸ್ವಾಮಿ ವಿವೇಕಾನಂದ ತಂಡ,ಆಸ್ಪತ್ರೆಯ ಎಲ್ಲ ಸಿಬ್ಬಂದಿವರ್ಗದವರು, ಆಡಳಿತಗಾರರು, ವೈದ್ಯಾಧಿಕಾರಿಗಳು, ಎಲ್ಲರ ಒಮ್ಮನಸ್ಸಿನಿಂದ ಮೂಡಿಬರುತ್ತಿರುವ ತ್ಯಾಗ ಮತ್ತು ಸೇವೆಗಳ ಕಾರಣಕ್ಕೆ ಸಂಸ್ಥೆ ಇಂತಹ ಮಹತ್ ಕಾರ್ಯಗಳ ನಡೆಸಲು ಸಾಧ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ದಂಡಾಧಿಕಾರಿಗಳಾದ ಮಾದೇಶ ರವರು ಮಾತನಾಡಿ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ಕಾರ್ಯವೈಖರಿ ಹಾಗೂ ಸ್ವಾಮಿ ವಿವೇಕಾನಂದ ತಂಡ ನಡೆಸುತ್ತಿರುವ ಸೇವಾ ಯಜ್ಞಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ನ್ಯಾಯಾಧೀಶರು ಕಾರ್ಯಕ್ರಮದ ಮುನ್ನ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮತ್ತು ಕಿವಿ, ಮೂಗು, ಗಂಟಲು ಶಾಖೆಗಳನ್ನು ಕೂಲಂಕುಶವಾಗಿ ವೀಕ್ಷಿಸಿದರು.
ಜೊತೆಯಲ್ಲಿ ಮೂರು ಅತ್ಯಾಧುನಿಕ ಯಂತ್ರಗಳೊಂದಿಗೆ ಸುಸಜ್ಜಿತವಾಗಿರುವ ಶಸ್ತ್ರಾಗಾರಗಳನ್ನು ವೀಕ್ಷಿಸಿ ಆಶ್ಚರ್ಯವನ್ನು ವ್ಯಕ್ತಪಡಿಸಿದರು.
ಆಸ್ಪತ್ರೆಯ ಒಳರೋಗಿಗಳನ್ನು ಮುಖ್ಯವಾಗಿ ಇತ್ತೀಚೆಗೆ ಅಂಗವಿಕಲತೆಯ ಪುನರ್ ಜೋಡಣಾ ಶಸ್ತ್ರಚಿಕಿತ್ಸೆಗೆ ಒಳಗಾದ 9 ಮಂದಿ ರೋಗಿಗಳನ್ನು ಸಂಪೂರ್ಣವಾಗಿ ವಿಚಾರಿಸಿ ಅವರ ಅನುಭವಗಳ ಸಾರಾಂಶವನ್ನು ನ್ಯಾಯಮೂರ್ತಿಗಳು ಪಡೆದರು.
ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ಲಕ್ಷ್ಮೀ ತಲ್ಲಂ ಬಾಬು ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಗಾರರು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
————————-ಪ್ರದೀಪ್ ಮಧುಗಿರಿ