ತುಮಕೂರು-ಹಲವಾರು ಜನರ ಹೋರಾಟದ ಫಲವಾಗಿ ಕನ್ನಡ ಭಾಷಿತ ಪ್ರದೇಶಗಳೆಲ್ಲ ಒಟ್ಟು ಗೂಡಿ ಅಖಂಡ ರಾಜ್ಯ ನಿರ್ಮಾಣ ಮಾಡಿದ್ದರೂ,ಕನ್ನಡ-ಕರ್ನಾಟಕ- ಕನ್ನಡಿಗ ಈ ಮೂರರ ಏಕೀಕರಣವಾಗದೆ ನಮ್ಮಲ್ಲಿ ಇನ್ನೂ ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಪ್ರದೇಶಗಳೆಂಬ ಭಾವನೆ ದೂರವಾಗಿಲ್ಲ. ಕರ್ನಾಟಕ ಏಕೀಕರಣ ಕೇವಲ ಭೌತಿಕವಾಗಿದೆಯೇ ಹೊರತು ಮಾನಸಿಕವಾಗಿಲ್ಲ. ಇದೊಂದು ರಾಜಕೀಯ ಏಕೀಕರಣವಾಯಿತೇ ವಿನಃ ಸಾಂಸ್ಕೃತಿಕ ಏಕೀಕರಣವಾಗಲಿಲ್ಲ ಎಂದು ಇತಿಹಾಸ ಸಂಶೋಧಕರಾದ ಡಾ. ಡಿ.ಎನ್. ಯೋಗೀಶ್ವರಪ್ಪ ವಿಷಾದ ವ್ಯಕ್ತಪಡಿಸಿದರು.
ಅವರು ತುಮಕೂರು ನಗರದ ಮಹಾಲಕ್ಷ್ಮಿ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದು ಪರಭಾಷಾ ವ್ಯಾಮೋಹ, ಭಾಷಾಂಧತೆ ಹಾಗೂ ಜಾಗತೀಕರಣದ ಅನೇಕ ಸವಾಲುಗಳಿಂದ ಕನ್ನಡ ಭಾಷೆ ನರಳುವಂತಾಗಿದೆ. ಕನ್ನಡ ಭಾಷೆಯ ರಕ್ಷಣೆಗೆ, ಬೆಳವಣಿಗೆಗೆ ಅನೇಕ ಕಡೆ ಹೋರಾಟಗಳು ನಡೆಯುತ್ತಿದ್ದರೆ ಬಹುಪಾಲು ಕನ್ನಡಿಗರು ನಿರಭಿಮಾನಿಗಳಾಗಿ ಅವುಗಳನ್ನು ನೋಡುತ್ತಿರುವುದು ವಿಪರ್ಯಾಸದ ಸಂಗತಿ ಆಗಿದೆ. ಇಂತಹ ಸoದಿಗ್ದ ಸ್ಥಿತಿಯಲ್ಲಿ ಎಲ್ಲರೂ ಒಟ್ಟುಗೂಡಿ ಭಿನ್ನಾಭಿಪ್ರಾಯಗಳನ್ನು ಮರೆತು ನಾಡಿನ ಸಂಸ್ಕೃತಿಯ ರಕ್ಷಣೆಗೆ ಬೆಂಬಲಿಸಬೇಕು ಎಂದು ಹೇಳಿದರು.
ಕನ್ನಡಿಗರ ರಾಜಧಾನಿ ಬೆಂಗಳೂರು ಇಂದು ಪರಭಾಷಿತರಿಂದ ತುಂಬಿ ಹೋಗಿದೆ. ಅವರೆಲ್ಲರೂ ಕನ್ನಡಿಗರ ಉದ್ಯೋಗ ವಕಾಶಗಳನ್ನು ಕಸಿದುಕೊಂಡಿರುವುದು ಆತಂಕಕಾರಿ ವಿಷಯ.ಅವರ್ಯಾರು ಕನ್ನಡ ಭಾಷೆಯನ್ನು ಕಲಿಯುತ್ತಿಲ್ಲ ಹಾಗೂ ಮಾತನಾಡುವುದಿಲ್ಲ. ಇಂತಹ ಸ್ಥಿತಿಯಲ್ಲಿರುವ ಬೆಂಗಳೂರು ಇಂದು ಪರಭಾಷಿಕರ ನಿಯಂತ್ರಣಕ್ಕೊಳಪಟ್ಟಿದೆ. ಇದನ್ನು ತಪ್ಪಿಸಬೇಕಾದರೆ ಬೆಂಗಳೂರುನಲ್ಲಿರುವ ಖಾಸಗಿ ಕಂಪನಿಗಳಲ್ಲಿ ಸರೋಜಿನಿ ಮಹಿಷಿ ವರದಿ ಪ್ರಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಲಕ್ಷ್ಮಿಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕ ಉಮಾದೇವ್ ಮಾತನಾಡಿ, ಸರ್ಕಾರ ದೇಸಿ ಭಾಷೆಗಳಿಗೆ ಆದ್ಯತೆ ನೀಡಿದ್ದರೂ ಇಂದು ಆಂಗ್ಲಮಾಧ್ಯಮ ಶಾಲೆಗಳು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಿರುವುದು ಆತಂಕಕಾರಿಯಾಗಿದೆ.ಗ್ರಾಮಾಂತರ ಪ್ರದೇಶದಲ್ಲಿ ನೆಲೆಯಾಗಿದ್ದ ಕನ್ನಡ ಭಾಷೆಗೆ ಇಂಗ್ಲೀಷ್ ಭಾಷೆ ಆಕ್ರಮಣ ಮಾಡುತ್ತಿದೆ. ಈ ಶಾಲೆಗಳಿಗೆ ಸರ್ಕಾರ ಕಡಿವಾಣ ಹಾಕಿ ಅಲ್ಲಿನ ಕನ್ನಡದ ಶಾಲೆಗಳನ್ನು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ವೇದಿಕೆಯಲ್ಲಿ ಬಸವಾರು ಎನ್ ಉಪಾಧ್ಯಕ್ಷರಾದ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಸ್ವಾಗತಿಸಿದರು.ನಿವೃತ್ತ ಉಪನ್ಯಾಸಕ ಸಿದ್ದಪ್ಪ ಪ್ರಸ್ತಾವಿಕ ನುಡಿಗಳನ್ನಾಡಿದರು.ಕೋಶಾಧ್ಯಕ್ಷ ಗಣೇಶ್ ಪಿ ವಂದಿಸಿದರು.