ತುಮಕೂರು-ಅನಧಿಕೃತವಾಗಿ ನೊಂದಾಯಿತವಲ್ಲದ ಕೀಟನಾಶಕವನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಕೀಟನಾಶಕ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿ 4.55 ಲಕ್ಷಕ್ಕೂ ಅಧಿಕ ಮೌಲ್ಯದ ನೊಂದಾಯಿತವಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.
ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿ ದೊಡ್ಡಹಳ್ಳಿ ಗ್ರಾಮದ ಪಾವಗಡ-ಕಲ್ಯಾಣದುರ್ಗ ರಸ್ತೆಯಲ್ಲಿರುವ ಎಸ್.ಎಲ್.ಎನ್. ಟ್ರೇಡರ್ಸ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ನೋಂದಾಯಿತವಲ್ಲದ ಕೀಟನಾಶಕವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ ಮತ್ತು ಅಶ್ವತ್ಥ್‌ನಾರಾಯಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಆಗ ಅನಧಿಕೃತ ಸರಬರಾಜುದಾರರಿಂದ ಅನಧಿಕೃತವಾಗಿ ಖರೀದಿ,ದಾಸ್ತಾನು ಮಾಡಿ ದಾಖಲಾತಿ ನಿರ್ವಹಣೆ ಇಲ್ಲದೆ ನೋಂದಾಯಿತವಲ್ಲದ ಕೀಟನಾಶಕವನ್ನು ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಅಂಗಡಿ ಮಳಿಗೆಯಲ್ಲಿ ವಶಕ್ಕೆ ಪಡೆಯಲಾಗಿರುವ ನೋಂದಾಯಿತವಲ್ಲದ ಕೀಟನಾಶಕಗಳ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ ಎಂದು ಕೃಷಿ ಜಾರಿದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.