ತುಮಕೂರು-ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ಮೇಲೆ ಕೃಷಿ ಇಲಾಖೆಯ ಜಾಗ್ರತ ದಳದಿಂದ ದಾಳಿ-ರಸಗೊಬ್ಬರ ವಶಕ್ಕೆ

ತುಮಕೂರು- ರಸಗೊಬ್ಬರ ಮಾರಾಟ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ರಸಗೊಬ್ಬರಗಳ ಲೇಬಲ್ ಉಲ್ಲಂಘನೆ ಮಾಡಿ ಮಾರಾಟ ಮಾಡುತ್ತಿದ್ದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಹೆಬ್ಬೂರಿನಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಆಗ್ರೋಟೆಕ್ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಎರಡು ರಸಗೊಬ್ಬರಗಳನ್ನು ರಸಗೊಬ್ಬರ ನಿಯಂತ್ರಣ ಆದೇಶ ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ ಹಾಗೂ ಅಶ್ವತ್ಥ್‌ನಾರಾಯಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.

ಸುಮಾರು 20 ಸಾವಿರ ಮೌಲ್ಯದ 100 ಕೆ.ಜಿ. ರಸಗೊಬ್ಬರ ಹಾಗೂ ರಸಗೊಬ್ಬರದ ಗ್ರೇಡ್ ನಮೂದಿಸದೆ ಮತ್ತು ತಯಾರಿಕಾ ಪರವಾನಗಿ ಸಂಖ್ಯೆ ತಪ್ಪಾಗಿ ನಮೂದಿಸಿದ್ದ 7.75 ಲೀಟರ್‌ ರಸಗೊಬ್ಬರದ 31 ಬಾಟಲ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಹಿಂದಿನ ಕ್ಷೇತ್ರ ಭೇಟಿಯಲ್ಲಿ ಸದರಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರಸಗೊಬ್ಬರ ನಿಯಂತ್ರಣ ಆದೇಶ 1995ರ ಉಲ್ಲಂಘನೆ (ಲೇಬಲ್) ಸಂಬಂಧ ಮಾರಾಟ ತಡೆ ಆದೇಶ ಜಾರಿ ಮಾಡಿ ಸಮಜಾಯಿಷಿ ನೀಡಲು ನೋಟಿಸ್ ಜಾರಿ ಮಾಡಿದ್ದರ ಮೇರೆಗೆ ಉತ್ಪಾದಕರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ದಾಳಿಯಲ್ಲಿ ಹೆಬ್ಬೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎನ್.ಎಂ. ಲೇಪಾಕ್ಷಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

× How can I help you?