ತುಮಕೂರು:ಸಮಾಜದ ಏಳಿಗೆಯಲ್ಲಿ ಪತ್ರಕರ್ತರ ಪಾತ್ರ ಮಹತ್ತರ ವಾದದ್ದು-ಜ,18 ರ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಸಹಕಾರ ನೀಡುವೆ-ಸಚಿವ ಕೆ.ಎನ್ ರಾಜಣ್ಣ

ತುಮಕೂರು:ಸಮಾಜದಲ್ಲಿ ಪತ್ರಕರ್ತರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ.ನಿರ್ಗತಿಕರಿಗೂ ಸದ್ಗತಿಯ ಮಾರ್ಗವನ್ನು ತೋರಿಸುತ್ತಾರೆ .ಜಾತಿ,ಕುಲ,ವರ್ಗ,ಪಂಗಡ,ವಲಯ ಎನ್ನದೆ ಸಮಾಜದ ಕಟ್ಟ ಕಡೆಯಲ್ಲಿ ಇರುವವರ ಪ್ರತಿಭೆಯನ್ನ ಅವರ ಪ್ರಾವೀಣ್ಯತೆಯನ್ನು ಹೊರ ತರುವವರೇ ಪತ್ರಕರ್ತರು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ 50 ರ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾದ ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಹಾಗೂ ಅಭಿನಂದನ ಸಮಾರಂಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ನಿಂತ ನೀರಿನಂತಾಗದೆ ಹರಿಯುವ ನದಿಯಂತಾಗಿ ಸಮಾಜದ ಅಂಕುಡೊoಕುಗಳನ್ನು ತಿದ್ದಿ ,ಸರ್ಕಾರ ಮತ್ತು ಅಧಿಕಾರಿಗಳ ಕಣ್ಣು ತೆರೆಸಿ ಕ್ರಿಯಾಶೀಲವಾಗಿ ಕೆಲಸ ಮಾಡುವ ವ್ಯಕ್ತಿತ್ವದವರು.ಇವರಿಗೂ ಕೂಡ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸದೃಢವಾಗಿಡುವ ಕಾರಣಕ್ಕಾಗಿ ತುಮಕೂರು ನಗರದಲ್ಲಿ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಬಹಳ ಕಷ್ಟಪಟ್ಟು ಜೀವನ ಸಾಗಿಸುವ ಪತ್ರಕರ್ತರು ತಮ್ಮದೇ ಆದ ಸಂಘಟನೆ ಮಾಡಿಕೊಂಡು ತಮ್ಮ ಕುಟುಂಬಸ್ಥರು ಮಕ್ಕಳಿಗೂ ಕ್ರೀಡಾಕೂಟ ಆಟೋಗಳಲ್ಲಿ ಭಾಗವಹಿಸುವಿಕೆ ಒಂದಾಗುವಿಕೆಯ ಕಾರ್ಯಕ್ರಮಗಳನ್ನ ಮಾಡುತ್ತಿರುವುದು ಶ್ಲಾಘನೀಯ.ಪತ್ರಕರ್ತರು ಸಂಘಟಿತರಾಗುವುದರ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುತ್ತಾರೆ.ಇವರ ಮಕ್ಕಳು ಪ್ರತಿಭಾನ್ವಿತರು ಒಳ್ಳೆಯ ವಿದ್ವತ್ ಉಳ್ಳವರು ಆಗಿದ್ದು, ಪಾಠದ ಜೊತೆಗೆ ಆಟದ ಪ್ರಾವೀಣ್ಯತೆಯನ್ನು ಹೊರಹಾಕುವ ಕಲಿಗಳಾಗಿದ್ದಾರೆ ಎಂದರು.

ಪತ್ರಕರ್ತರು ಜನವರಿ ಮಾಹೆಯಲ್ಲಿ ನಡೆಸುವ ರಾಜ್ಯಮಟ್ಟದ ಸಮ್ಮೇಳನಕ್ಕೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ನಾನು ಕೂಡ ಸಹಕಾರ ನೀಡಿ ಯಶಸ್ವಿಗೊಳಿಸುವಲ್ಲಿ ಪಾತ್ರರಾಗುತ್ತೇವೆ. ಪತ್ರಕರ್ತರ ಪ್ರತಿಯೊಂದು ಕಾರ್ಯಕ್ರಮಗಳು ನಮಗೆ ಅಚ್ಚುಮೆಚ್ಚಿನಾಡಾಗಿದ್ದು, ಈವರೆಗೂ ಅವುಗಳನ್ನು ನಾವು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ ಮುಂದೆಯೂ ಇದೇ ರೀತಿಯಾದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ ನಾಗಣ್ಣ ಅವರು ಮಾತನಾಡಿ, ಸಮ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಪತ್ರಕರ್ತರು ಮೇಲ್ಪಂತಿಯಲ್ಲಿದ್ದಾರೆ. ಇವರಿಗೂ ಕೂಡ ಕ್ರೀಡಾ ಮನೋಭಾವ ಮಾನಸಿಕ ಮತ್ತು ದೈಹಿಕ ಆರೋಗ್ಯ ಇರಲಿ ಎನ್ನುವ ಕಾರಣಕ್ಕೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ.ನಾನು ಕೂಡ ಈ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತನಾಗಿ ಬಹುಮಾನ ಸ್ವೀಕರಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಈ ರೀತಿಯಾಗಿ ಪತ್ರಕರ್ತರು ಸಾಧನೆಯ ಹಾದಿಯಲ್ಲಿ ಬೆಳೆಯಲಿ ಎಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.

ಆಧುನಿಕ ಸಮಾಜದ ಅಭಿವೃದ್ಧಿಯ ಹರಿಕಾರ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಜಿಲ್ಲೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು,ಅಥ್ಲೆಟಿಕ್ಸ್ ಕ್ರೀಡಾಂಗಣ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ಚಾಲನೆ ಕೊಡಿಸಿದ್ದಾರೆ.ತಾನು ಕೂಡಾ ಒಬ್ಬ ಕ್ರೀಡಾ ಅಭಿಮಾನಿಯಾಗಿ ಕ್ರೀಡಾಪಟುವಾಗಿ ಪತ್ರಕರ್ತರಿಗೂ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದು ಪತ್ರಕರ್ತರು ಇವರ ಕಾರ್ಯ ಸಾಧನೆಯನ್ನು ಪರಿಗಣಿಸಬೇಕು ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ ಅವರು ಮಾತನಾಡಿ, ತುಮಕೂರು ಜಿಲ್ಲೆಗೆ ಇನ್ನೊಂದು ಹೆಮ್ಮೆಯ ವಿಷಯವೇನೆಂದರೆ ಮುಂದಿನ ಜನವರಿಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ಈಗಾಗಲೇ ನಿಗದಿಗೊಳಿಸ ಲಾಗಿದ್ದು,ಸುಮಾರು 6,000 ಪತ್ರಕರ್ತರು ಸೇರಿದಂತೆ ಅವರ ಕುಟುಂಬಸ್ಥರು ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ. ಎರಡು ದಿನಗಳ ಕಾಲ ನಡೆಯುವ ಬೃಹತ್ ಪತ್ರಕರ್ತರ ಸಮ್ಮೇಳನಕ್ಕೆ ಜನವರಿ 18 ರ ದಿನಾಂಕ ಬಹುತೇಕ ಅಂತಿಮವಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ, ಜಿ. ಪರಮೇಶ್ವರ್, ಕೆ. ಎನ್ ರಾಜಣ್ಣ ಸೇರಿದಂತೆ ಜಿಲ್ಲಾಧಿಕಾರಿಗಳು ಹಾಗೂ ಇತರೆ ಗಣ್ಯರೊಂದಿಗೆ ಸಮಾಲೋಚನೆ ಮತ್ತು ಎರಡು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಅವಿರತ ಶ್ರಮವನ್ನ ಹಾಕಿ ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲ್ಪತರು ನಗರಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತ ರಿಗಾಗಿ ಆಯೋಜನೆ ಮಾಡಲಾಗಿದ್ದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೀಡಿದ ಆಥಿತ್ಯ ಉಠೋಪಚಾರಕ್ಕೆ ಹಲವರು ಶ್ರಮಿಸಿದ್ದು ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ವಿಶೇಷವಾಗಿ ಯುವಜನ ಮತ್ತು ಸಬಲೀಕರಣ ಇಲಾಖೆ, ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿಗಳು ಸೇರಿದಂತೆ ಇತರರು ಸಹಕಾರ ನೀಡಿ ಕ್ರೀಡಾಕೂಟ ಯಶಸ್ವಿಗೆ ಕಾರಣರಾಗಿದ್ದಾರೆ ಇವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿಜೇತರಿಗೆ ಬಹುಮಾನಗಳನ್ನ ವಿತರಣೆ ಮಾಡಲಾಯಿತು. ಕ್ರೀಡಾಕೂಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಭಾಗಿಯಾದ ಸದಸ್ಯರುಗಳಿಗೆ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸಂಚಲಕರಾದ ಡಿ.ಎಂ.ಸತೀಶ್, ಸದಸ್ಯರುಗಳಾದ ಮಧುಕರ್, ಅನು ಫೋಟೋ ಫ್ಲಾಶ್ ಶಾಂತರಾಜು, ಪ್ರಜಾಪ್ರಗತಿ ಎಸ್ ನಾಗಣ್ಣ, ತುಮಕೂರು ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ವೀರಯ್ಯ ಕಲ್ಮಠ, ಜಿಲ್ಲಾಕ್ರೀಡಾಧಿಕಾರಿ ರೋಹಿತ್ ಗಂಗಾಧರ್, ಸರ್ವೋದಯ ವಿದ್ಯೆ ಸಂಸ್ಥೆಯ ಕಾರ್ಯದರ್ಶಿ ಕೆ ವಿ ಸುಬ್ಬರಾವ್, ಕ್ರೀಡಾ ಕೊಚ್‌ಗಳಾದ ಇಸ್ಮಾಯಿಲ್, ಗುರುಪ್ರಸಾದ್, ರಾಕ್ಲೈನ್ ರವಿಕುಮಾರ್, ಸೇರಿದಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಚಿಕ್ಕೀರಪ್ಪ, ಪ್ರಧಾನ ಕಾರ್ಯದರ್ಶಿ ರಘುರಾಮ್, ಕಾರ್ಯದರ್ಶಿ ಹಾರೋಗೆರೆ ಸತೀಶ್, ನಿರ್ದೇಶಕರುಗಳಾದ ಕೊರಟಗೆರೆ ಮೂರ್ತಿ, ಶಂಕರಪ್ಪ,ನoದೀಶ್ ಬಿ.ಎಲ್., ಹೆಚ್.ಎಸ್.ಪರಮೇಶ್, ಜಯಣ್ಣ, ಕಾಗ್ಗೆರೆ ಸುರೇಶ್, ಶಂಕರಪ್ಪ ಕೊರಟಗೆರೆ ಯಶ್, ರೇಣುಕ ಪ್ರಸಾದ್, ಶ್ರೀವತ್ಸ, ಬೆಳಗೆರೆ ಜಯಣ್ಣ ಸೇರಿದಂತೆ ವಿವಿಧ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಪತ್ರಕರ್ತರಗಳು ಮತ್ತು ಅವರ
ಕುಟುಂಬಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?