ತುಮಕೂರು:ಸoವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತೇವೆ,ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಎಂದು ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಡೆದುಕೊಂಡು ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಬೇಕು ಎಂದು ಮಾದಿಗ ಸಮುದಾಯದ ಮುಖಂಡ ಡಾ.ಲಕ್ಷ್ಮಿಕಾಂತ್ ಆಗ್ರಹಿಸಿದರು.
ಸರ್ವೋಚ್ಛ ನ್ಯಾಯಾಲಯದ ಪೀಠದ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಜಾರಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ವಿವಿಧ ಮಾದಿಗ ಸಂಘಟನೆಗಳ ಮುಖಂಡರು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು..
ಒಳಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿ ಮಾಡದೆ ಸಮಿತಿ ಮಾಡುತ್ತೇವೆ, ಹೈಕಮಾಂಡ್ ಕೇಳಿ ತೀರ್ಮಾನ ಮಾಡುತ್ತೇವೆ ಎಂಬ ಕುಂಟು ನೆಪ ಹೇಳುತ್ತಿದ್ದಾರೆ. ಜಾರಿ ಮಾಡದಂತೆ ತಡೆಯುವ ಹುನ್ನಾರ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ,ಜಿ.ಪರಮೇಶ್ವರ್ ರವರು ಪಕ್ಷದ ಚುನಾವಣಾ ಪಾಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನವರು ಜಾರಿಗೆ ತರವಲ್ಲಿ ಯಾವುದೇ ಶ್ರಮ ವಹಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ತಿಂಗಳ 18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವರ್ಗೀಕರಣ ಜಾರಿ ಸಂಬoಧ ಒಪ್ಪಿಗೆ ಸೂಚಿಸಿ ಜಾರಿಗೆ ತರಬೇಕು.ತಪ್ಪಿದಲ್ಲಿ ರಾಜ್ಯಾದ್ಯಂತ ಮುಖ್ಯಮಂತ್ರಿ, ಮಂತ್ರಿಗಳನ್ನು ಘೇರಾವ್ ಮಾಡಲಾಗುವುದು. ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
ನಡೆಸಲಾಗುವುದು ಎಂದು ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿ.ಜೆ.ಪಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ಕುಮಾರ್ ಮಾತನಾಡಿ, ದತ್ತಾಂಶ ಲಭ್ಯವಿಲ್ಲ ಎಂಬ ಸಬೂಬನ್ನು ಒಡ್ಡಿ ಒಳಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿ ಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರದ ಈ ಧೋರಣೆ ಸರಿಯಲ್ಲ. ಸರ್ಕಾರದ ಮುಂದಿರುವ ಅನೇಕ ವರದಿಗಳಲ್ಲಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಹಾಗೂ ಸವಲತ್ತುಗಳಿಂದ ವoಚಿತವಾಗಿರುವ ದತ್ತಾಂಶಗಳ ವಿವರಗಳು ಲಭ್ಯವಿರುತ್ತವೆ ಎಂದು ಹೇಳಿದರು.ಒಳಮೀಸಲಾತಿ ಜಾರಿಯಾಗುವ ತನಕ ಸರ್ಕಾರ ಬ್ಯಾಕ್ಲಾಗ್ ಹುದ್ದೆ ಸೇರಿದಂತೆ ಹೊಸದಾಗಿ ಯಾವುದೇ ಹುದ್ದೆಗಳ ನೇಮಕಾತಿ ಮಾಡಬಾರದು.
ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಂದೆ ಮಾದಿಗ ಸಮುದಾಯ ಸರ್ಕಾರವನ್ನು ಅಧಿಕಾರದಿಂದ ಕೆಳಗಿಸುವವರೆಗೂ ಉಗ್ರ ಹೋರಾಟ ಮಾಡುವುದಾಗಿ ಅನಿಲ್ಕುಮಾರ್ ಎಚ್ಚರಿಕೆ ನೀಡಿದರು.
ಶಾಸಕ ಸುರೇಶ್ಗೌಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.
ಮಾದಿಗ ಸಮುದಾಯದ ಹೋರಾಟ, ಬೇಡಿಕೆ ನ್ಯಾಯಯುತವಾಗಿದೆ. ಇದೇ ಕಾರಣಕ್ಕೆ ಹಿಂದಿನ ಬಿ.ಜೆ.ಪಿ ಸರ್ಕಾರ ಒಳಮೀಸಲಾತಿ ಜಾರಿಗೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಜಾರಿ ಮಾಡುವಲ್ಲಿ ನಿರ್ಲಕ್ಷ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿದರು.ಈ ಬಗ್ಗೆ ತಾವು ವಿಧಾನ ಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಹೇಳಿದರು.
ಗುಬ್ಬಿಯ ಜೆಡಿಎಸ್ ಮುಖಂಡ ನಾಗರಾಜು, ವೈ.ಹೆಚ್.ಹುಚ್ಚಯ್ಯ,ಮುಖಂಡರಾದ ಮಾರುತಿ ಗಂಗಹನುಮಯ್ಯ, ಸೇರಿದoತೆ ವಿವಿಧ ಮಾದಿಗ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.