ತುಮಕೂರು:ಮಕ್ಕಳಿಗೆ ಪಠ್ಯದ ಶಿಕ್ಷಣ ನೀಡಿದರೆ ಸಾಲದು ಅವರಿಗೆ ನೈತಿಕ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಪೋಷಕರು ಹೊರಬೇಕು-ನ್ಯಾ.ನೂರುನ್ನಿಸಾ

ತುಮಕೂರು:ನಾವು ಇಂದು ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದೇವೆ,ಅವರ ಶಿಕ್ಷಣಕ್ಕಾಗಿ ಬಹಳಷ್ಟು ಹಣ ಖರ್ಚು ಮಾಡುತ್ತೇವೆ.ಮಕ್ಕಳಿಗಾಗಿ ಎಲ್ಲವನ್ನೂ ನೀಡುವ ಪೋಷಕರು,ಅವರಿಗಾಗಿ ಸಮಯವನ್ನೂ ನೀಡಬೇಕಿದೆ.ಬರೀ ಪಠ್ಯದ ಶಿಕ್ಷಣ ನೀಡಿದರೆ ಸಾಲದು ಅವರಿಗೆ ನೈತಿಕ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಪೋಷಕರು ಹೊರಬೇಕು.ಈ ಕೊರತೆಯಿಂದಲೇ ಇಂದು ವೃದ್ಧಾಶ್ರಮಗಳಲ್ಲಿ ಬಹುತೇಕರು ವಿದ್ಯಾವಂತ ಮಕ್ಕಳ ಪೋಷಕರೇ ಇದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಅವರು ತಿಳಿಸಿದರು.

ನಗರದ ರಿಂಗ್‌ರಸ್ತೆಯಲ್ಲಿರುವ ಕ್ರಿಸ್ಟಲ್ ಪ್ಯಾಲೇಸ್‌ನಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಷನ್ ಅಂಡ್ ಅಕಾಡಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ’2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯದ ಶಿಕ್ಷಣದ ಕೊರತೆ ತುಂಬಾ ಇದೆ.ಪೋಷಕರು ಮಕ್ಕಳಿಗಾಗಿ ಸಮಯಕೊಟ್ಟು, ಅವರ ವಿದ್ಯಾಭ್ಯಾಸ,ಚಲನವಲನಗಳ ಬಗ್ಗೆ ಗಮನಹರಿಸಿ,ಹಿರಿಯರಲ್ಲಿ ಗೌರವಭಾವ, ಜೀವನ ಮೌಲ್ಯ, ಬಡತನ-ಕಷ್ಟ, ರಾಷ್ಟ್ರಾಭಿಮಾನ, ಸಾಮಾನ್ಯ ಕಾನೂನುಗಳ ಅರಿವು, ಉತ್ತಮ ನಡವಳಿಕೆಗಳ ಬಗ್ಗೆ ತಿಳಿಹೇಳುವ ಅಗತ್ಯ ತುಂಬಾ ಇದೆ ಎಂದರು.

ಶಾಲಾ ಮತ್ತು ಪ್ರೌಢಶಾಲಾ ಮಕ್ಕಳೂ ಕೂಡ ಇಂದು ಸಾಮಾಜಿಕ ಮಾದ್ಯಮದ ಗೀಳಿಗೆ ಬಿದ್ದಿದ್ದಾರೆ. ಪೋಷಕರ ಅರಿವಿಗೆ ಬಾರದಂತೆ ಇನ್‌ಸ್ಟಾಗ್ರಮ್,ಫೇಸ್‌ಬುಕ್‌ಗಳಲ್ಲಿ ಖಾತೆ ಹೊಂದಿರುತ್ತಾರೆ.ಅದರಲ್ಲಿನ ಸಾವಿರಾರು ಫಾಲೋವರ್ಸ್‌ಗಳಲ್ಲಿ ಒಬ್ಬರ ಪರಿಚಯವೂ ಅವರಿಗೆ ಇರುವುದಿಲ್ಲ.ಮಕ್ಕಳ ಸಮಸ್ಯೆಗಳು ಆರಂಭವಾಗುತ್ತಿರುವುದೇ ಅಲ್ಲಿ.ಬಾಲ್ಯ ಗರ್ಭಾವಸ್ಥೆ, ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳಿಗೆ ಇದು ಕಾರಣವಾಗುತ್ತಿದೆ.ಜಿಲ್ಲಾ ಕಾರಾಗೃಹದಲ್ಲಿರುವವರ ಪೈಕಿ 120ಕ್ಕೂ ಹೆಚ್ಚು ಮಂದಿ ಪೋಕ್ಸೋ ಪ್ರಕರಣದಲ್ಲಿ ಭಾಗಿಯಾದವರೇ ಇದ್ದಾರೆ.

ಮನೆಯ ವಾತಾವರಣ ಮಕ್ಕಳ ನೈತಿಕ ಬೆಳವಣಿಗೆಗೆ ಪೂರಕವಾಗಿರಲಿ,ತಂದೆ ತಾಯಿಗಳು ಮಕ್ಕಳಿಗೆ ರೋಲ್‌ಮಾಡೆಲ್‌ಗಳಾಗಲಿ ಎಂದು ಆಶಿಸಿದ ಅವರು,ವಿದ್ಯಾರ್ಥಿಗಳು ಭವಿಷ್ಯದ ಒಳ್ಳೆಯ ಕನಸುಗಳನ್ನು ಕಾಣಬೇಕು, ಸಾಮಾಜಿಕ ಹೊಣೆಗಾರಿಕೆಯಲ್ಲಿ ಪಾಲುದಾರರಾಗಬೇಕೆಂದರು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಅಸ್ಗರ್ ಬೇಗ್ ಅವರು ಮಾತನಾಡಿ,ವೈದ್ಯಕೀಯ ವಿದ್ಯಾರ್ಥಿಗಳು ಮೊದಲು ತಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯ ಗುಣಗಳು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ವಾಜಿದ್ ಖಾನ್, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಾಮಾಜಿಕ ಬದುಕಿನ ಅರಿವು ಮೂಡಿಸಬೇಕು, ಇಂದು ಅಭಿನಂದನೆ ಸ್ವೀಕರಿಸಿದ ಭವಿಷ್ಯದಲ್ಲಿ ವೈದ್ಯರಾಗುವ ವಿದ್ಯಾರ್ಥಿಗಳು ಸಮಸ್ಥ ಮನುಷ್ಯ ಧರ್ಮದ ಒಳಿತಿಗಾಗಿ ಸೇವೆಸಲ್ಲಿಸಬೇಕು. ತಮ್ಮ ವೈದ್ಯಕೀಯ ಸೇವೆಯಲ್ಲಿ ಜಾತಿ ಧರ್ಮಗಳ ಯಾವುದೇ ಗೋಡೆ, ಪರದೆ, ಕಂದಕಗಳು ನಿರ್ಮಾಣವಾಗದಿರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಷನ್ ಮತ್ತು ಅಕಾಡಮಿ ಅಧ್ಯಕ್ಷ ನಿಸಾರ್ ಅಹಮದ್ (ಆರಿಫ್) ಮಾತನಾಡಿ, ದಶಕಗಳ ಹಿಂದೆ ಶೈಕ್ಷಣಿಕವಾಗಿ ಹಿಂದುಳಿದಿದ್ದ ಅಲ್ಪಸಂಖ್ಯಾತ ಸಮುದಾಯ ಇಂದು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿರುವುದು ಆಶಾದಾಯಕ, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಜೊತೆಗೆ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾದ ಸಹಕಾರವನ್ನೂ ಸಹ ನಮ್ಮ ಫೌಂಡೇಷನ್ ನೀಡಲಿದೆ ಎಂದರು.

ಮೂಳೆತಜ್ಞರಾದ ಡಾ. ಅಬ್ದುಲ್ ಖಾದರ್, ವಕೀಲರಾದ ಶಫಿ ಅಹಮದ್, ಡಾ. ಇಂಡಿಯಾ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಹುಸೈನ್, ಕ್ರಿಸ್ಟೆಲ್ ಪ್ಯಾಲೇಸ್ ಮಾಲೀಕರಾದ ಲಿಯಾಕತ್, ಎಸ್‌ಕೆವೈ ಮೊಬೈಲ್ ಅಕ್ಸಸರೀಸ್ ಸಿಇಓ ಸೈಯದ್ ಹಾಷಿಂ, ಶಾಹಿದ್ ಅಫ್ರಿದಿ, ಮಹಮದ್ ಇಲಾಹಿ, ಸಮಾಜದ ಮುಖಂಡ ಊರ್ಡಿಗೆರೆ ನಯಾಜ್ ಖಾನ್, ಫೌಂಡೇಷನ್‌ನ ಉರೂಜ್ ಪಾಷ, ಅಮೀಮ್ ಅಹಮದ್, ಮೊಹಮದ್ ಅಲೀ, ರುಕ್ಸಾನ ಬಾನು, ಸಾನಿಯಾ, ತಸ್ಮಿಯಾ, ಶ್ರೀಮತಿ ಶಾಜಿಯಾ, ಅಮೃತಾ, ಶಾಬಾಜ್ ಅಹಮದ್, ಅಬ್ದುಲ್ ರಹಮಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ 12 ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಅವರ ತಂದೆತಾಯಿಯರೊಂದಿಗೆ ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

Leave a Reply

Your email address will not be published. Required fields are marked *

× How can I help you?