ತುಮಕೂರು-ಪ್ರಥಮ ದಸರಾ ಉತ್ಸವ-ಕುಟುಂಬ ಸಮೇತರಾಗಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

ತುಮಕೂರು- ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಮುಖ್ಯದ್ವಾರ, ವೇದಿಕೆಗಳು ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 11 ಮತ್ತು 12 ರಂದು ನಡೆಯುವ ಜಂಬೂಸವಾರಿ ಮೆರವಣಿಗೆ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ್ತು ಕುಟುಂಬ ಸಮೇತ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಶಾರದಾ ಅಲಂಕಾರದಲ್ಲಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಅವರು, ದಸರಾ ಉತ್ಸವದ 9 ನೇ ದಿನವಾದ ಅಕ್ಟೋಬರ್ 11 ರಂದು ಜಿಲ್ಲೆಯ ಜನರ ಮನಸ್ಸನ್ನು ರಂಜಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಲಿದ್ದು, ಖ್ಯಾತ ಗಾಯಕ ಗುರು ಕಿರಣ್ ಮತ್ತು ಕಂಬದ ರಂಗಯ್ಯ ಅವರ ತಂಡಗಳಿಂದ ಸಂಗೀತ ರಸಸಂಜೆ, ಕುಸ್ತಿ, ಆಕರ್ಷಕ ಲೇಸರ್ ಶೋ ಕಾರ್ಯಕ್ರಮವಲ್ಲದೆ, ಅ.12 ರಂದು ಮಧ್ಯಾಹ್ನ 1 ಗಂಟೆಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ.

ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಆನೆ ಎಲ್ಲರ ಗಮನ ಸೆಳೆಯಲಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪೊಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾ ತಂಡಗಳು, ವಿಂಟೇಜ್ ಕಾರ್‌ಗಳು, ಪೊಲೀಸ್ ಹಾಗೂ ಎನ್.ಸಿ.ಸಿ ಬ್ಯಾಂಡ್, ಹಳ್ಳಿಕಾರ್ ಎತ್ತುಗಳು ಸೇರಿದಂತೆ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಜಿಲ್ಲೆಯ 70 ದೇವರುಗಳು ಇರಲಿವೆ ಎಂದು ತಿಳಿಸಿದರು.

—————– ಕಾಂತರಾಜು ತುಮಕೂರು

Leave a Reply

Your email address will not be published. Required fields are marked *

× How can I help you?