ತುಮಕೂರು-ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳಲ್ಲಿ ಒoದಾಗಿರುವ ಪತ್ರಿಕಾರಂಗದ ಮೇಲೆ ಸಾಮಾಜಿಕ ಜವಾಬ್ದಾರಿ ಬಹಳಷ್ಟಿದೆ. ಹಾಗಾಗಿ ಪತ್ರಿಕೆಗಳಲ್ಲಿ ಬರೆಯುವ ಒಂದೊoದು ಅಕ್ಷರವೂ ಸಮಾಜದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದನ್ನು ಅರಿತು ಪತ್ರಕರ್ತರು ವಸ್ತುನಿಷ್ಠ,ಸತ್ಯ ವರದಿಗಳತ್ತ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು.
ನಗರದ ಹೊರಪೇಟೆಯ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸoಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ,ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕು ಅಂಗಗಳಾಗಿರುವ ಶಾಸಕಾಂಗ,ಕಾರ್ಯಾoಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದ ಪೈಕಿ ತುಂಬಾ ಸ್ವಾತಂತ್ರ್ಯ ಇರುವ ಅಂಗಗಳೆoದರೆ ನ್ಯಾಯಾಂಗ ಮತ್ತು ಪತ್ರಿಕಾರಂಗ. ಪತ್ರಿಕಾರoಗಕ್ಕೆ ಸ್ವಾತಂತ್ರ್ಯದಷ್ಟೇ ಜವಾಬ್ದಾರಿಯೂ ಇದೆ. ಇದನ್ನು ಅರಿತು ಪತ್ರಕರ್ತರು ನೈಜ ಸುದ್ದಿಗಳಿಗೆ ಒತ್ತು ನೀಡಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿ, ಸಮಸ್ಯೆಗಳಿಗೆ ಸ್ಥಳೀಯ ಪತ್ರಿಕೆಗಳು ಹೆಚ್ಚು ಒತ್ತು ನೀಡಿ ಸುದ್ದಿಗಳನ್ನು ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು ಸಹ ಕಾರ್ಯೋನ್ಮುಖವಾಗಿವೆ ಎಂದು ಅವರು ಹೇಳಿದರು.
ಏಷ್ಯಾದಲ್ಲೇ ಭಾರತ ದೇಶದಲ್ಲಿ ಮುದ್ರಣ ಮಾಧ್ಯಮದ ಪ್ರಸರಣ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದು ನಮ್ಮ ದೇಶದ ವಿಶೇಷ. ದೇಶದ ಜನ ಹೆಚ್ಚು ದಿನಪತ್ರಿಕೆಗಳನ್ನು ಓದುತ್ತಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಪತ್ರಿಕಾರಂಗ ಬಹಳ ಶಕ್ತಿದಾಯಕ ಅಂಗ. ದೇಶದ ಅಭಿವೃದ್ಧಿ ಸೇರಿದಂತೆ ಎಲ್ಲ ರಂಗಗಳಲ್ಲೂ ಬೆಳಕು ಚೆಲ್ಲುವ 4ನೇ ಅಂಗ ಪತ್ರಿಕಾರoಗ ಎಂದು ಹೇಳಿದರು.
ಇತಿಹಾಸವನ್ನು ಮರುಸೃಷ್ಠಿ ಮಾಡಲು ಬರಹದಿಂದ ಮಾತ್ರ ಸಾಧ್ಯ. ಬರಹ ಇತಿಹಾಸದ ಭಾಗವಾಗಲಿದೆ. ಹಾಗಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಲೇಖನಗಳು, ಸುದ್ದಿಗಳು ವಸ್ತುನಿಷ್ಠವಾಗಿರಬೇಕು, ನೈಜತೆಯಿಂದ ಕೂಡಿರಬೇಕು ಎಂದು ಅವರು ಹೇಳಿದರು.
ಅಭಿವೃದ್ಧಿ ಕಾರ್ಯ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ಇಂತಿಷ್ಟೆ ಅವಧಿ ಎಂದು ನಿಗದಿ ಇರುತ್ತದೆ. ಆದರೆ ಬರವಣಿಗೆಗೆ ಯಾವುದೇ ಕಾಲಮಿತಿ ಇರುವುದಿಲ್ಲ.ಬದಲಾಗಿ ಕಾಲಾತೀತ ಶಕ್ತಿ ಇದೆ ಎಂದರು.
ಮಾನವ ಸಂಪನ್ಮೂಲ ಇದ್ದರೆ ಮಾತ್ರ ದೇಶ ಮುನ್ನಡೆಯಲು ಸಾಧ್ಯ.ಇದಕ್ಕೆ ಪತ್ರಿಕಾರಂಗ ಬಹಳ ಮಹತ್ತರ ಪಾತ್ರ ವಹಿಸುತ್ತದೆ ಮತ್ತು ಸಮಾಜದಲ್ಲಿ ಎಲ್ಲಕ್ಕಿಂತ ಪತ್ರಿಕಾರಂಗ ಶಕ್ತಿಯುತವಾಗಿ ನಿಲ್ಲುತ್ತದೆ ಎಂದ ಅವರು, ಸಂಪಾದಕರುಗಳು ಒಂದು ಪತ್ರಿಕೆಯ ಮೂಲ ಮೂರ್ತರೂಪ.ಹಾಗಾಗಿ ಮೌಲ್ಯಯುತ ಸುದ್ದಿಗಳಿಗೆ ಒತ್ತು ನೀಡಿ ಎಂದು ಕರೆ ನೀಡಿದರು.
ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್ ಮಾತನಾಡಿ, ಪತ್ರಿಕೆಗಳು ಜನರ ಧ್ವನಿ. ಸಣ್ಣ ಪತ್ರಿಕೆಗಳು ಸ್ಥಳೀಯವಾಗಿ ಸಮಸ್ಯೆಗಳನ್ನು ಬಿಂಬಿಸುವ ಸುದ್ದಿಗಳಿಗೆ ಒತ್ತು ನೀಡುವ ಕೆಲಸ ಮಾಡುತ್ತಿವೆ. ವಿಷಯದ ಗಂಭೀರತೆ ಇದ್ದರೆ ಇಂದು ವಾಟ್ಸಾಪ್, ಫೇಸ್‌ಬುಕ್ ಮೂಲಕ ನಿರರ್ಗಳವಾಗಿ ಎಲ್ಲರನ್ನೂ ತಲುಪುತ್ತವೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಮಾತನಾಡಿದರು.
ಸಮಾರoಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿ,ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಗಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್, ವಾರ್ತಾ ಇಲಾಖೆಯ ರೂಪಕಲಾ, ಧರ್ಮಸ್ಥಳ ಸಂಸ್ಥೆಯ ಸತೀಶ್ ಸುವರ್ಣ, ಸಿ.ರಂಗನಾಥ್, ಕುಚ್ಚಂಗಿ ಪ್ರಸನ್ನ, ಜಿಲ್ಲಾ ಸಂಘದ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ, ಎಂ. ಕಂಬಣ್ಣ,ಸಿ.ಎನ್. ಮಹೇಶ್‌ಕುಮಾರ್, ಸಿ. ಜಯಣ್ಣ, ಮಾರುತಿ ಗಂಗಹನುಮಯ್ಯ, ಬಸವರಾಜು,ಆರ್. ನಾಗರಾಜು, ಸಿದ್ದರಾಜಯ್ಯ, ಎಂ.ಎಸ್. ಅಭಿಷೇಕ್, ಅಕ್ಷಯ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.
—————ಚಂದ್ರಚೂಡ