ತುಮಕೂರು:ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಹೊರಹಾಕಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಕೆಲವು ಕಡೆ ಅವಕಾಶಗಳು ಸಿಗುವುದಿಲ್ಲ ಆದರೆ ಅಂತಹ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆಯೇ ವಾರ್ಷಿಕ ಸ್ಮರಣ ಸಂಚಿಕೆಯ ಪ್ರಮುಖ ಉದ್ದೇಶವಾಗಿದ್ದು ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಕರೆ ನೀಡಿದರು.
ನಗರದ ರೈಲ್ಷೆಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಂಭಾಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ತುಂಬೆ’ ವಾರ್ಷಿಕ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಗ್ರಾಮೀಣ ಮೂಲದ ವಿದ್ಯಾರ್ಥಿಗಳು ಹೆಚ್ಚು ಸರ್ಕಾರಿ ಕಾಲೇಜುಗಳಲ್ಲಿ ಪದವಿ ಕಲಿಯಲು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆ.ಸಂಕೋಚ ಬಿಟ್ಟು ತಮ್ಮ ಅಂತರಂಗದ ಪ್ರತಿಭೆಯನ್ನು ಹೊರಹಾಕುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳವ ಕೆಲಸ ಮಾಡಬೇಕಿದೆ ಎಂದರು.
ಮೂರು ವರ್ಷದ ಸಮಯವು ವ್ಯರ್ಥವಾಗದಂತೆ ಸಮಯದ ಮೌಲ್ಯವನ್ನರಿತು ವ್ಯವಸ್ಥಿತ ಕಾರ್ಯ ಮಾಡಬೇಕು. ಪ್ರಪಂಚದ ಬಹುತೇಕ ಚಿಂತಕರು, ಸಾಹಿತಿಗಳು, ಬರಹಗಾರರು, ಕಥೆಗಾರರು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ವಿದ್ಯಾರ್ಥಿಗಳು ಬರೆಯುವ ಅಭ್ಯಾಸ ರೂಢಿಸಿಕೊಳ್ಳುವ ಮುನ್ನ ಹತ್ತಾರು ಪುಸ್ತಕಗಳನ್ನು ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ ಎಂದು ಹೇಳಿದರು.
ನಿಕಟಪೂರ್ವ ಪ್ರಾಂಶುಪಾಲರಾದ ತರುನ್ನಂ ನಿಖತ್ ಎಸ್ ಮಾತನಾಡಿ, ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೋಸ್ಕರವೇ ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನು ರೂಪಿಸಿವೆ. ಕಥೆ, ಕವನ, ಲೇಖನ, ಸಂಶೋಧನೆಯಂತಹ ಬರಹಗಳನ್ನು ಬರೆದು ಪ್ರಕಟಿಸುವ ಜವಾಬ್ದಾರಿಯುತ ಕೆಲಸವನ್ನು ವಿದ್ಯಾರ್ಥಿದೆಸೆಯಲ್ಲಿಯೇ ಮಾಡಲು ಮುಂದಾಗುವುದು ಒಳ್ಳೆ ಬೆಳವಣಿಗೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬೀಳದೆ ಪುಸ್ತಕವನ್ನು ಅಪ್ಪಿಕೊಳ್ಳುವುದರೊಂದಿಗೆ ಜ್ಞಾನಭಂಡಾರವನ್ನು ಹೆಚ್ಚು ತುಂಬಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಟಿ.ಡಿ.ವಸಂತ,ಇಂದು ಬಿಡುಗಡೆಗೊಂಡಿರುವ ಸ್ಮರಣಸಂಚಿಕೆಯು ಸಂಪಾದಕೀಯ ಮಂಡಳಿಯ ಶ್ರಮದಿಂದ ಉತ್ತಮವಾಗಿ ಮೂಡಿಬಂದಿದೆ. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಅವುಗಳನ್ನು ಗುರುತಿಸುವ ಕೆಲಸ ನಮ್ಮದಾಗಬೇಕು. ಅದಕ್ಕೆ ವಿದ್ಯಾರ್ಥಿಗಳ ಶ್ರಮ ಹಾಗೂ ಸಹಕಾರ ಅಗತ್ಯವಿರುತ್ತದೆ. ಆದಷ್ಟು ವಿದ್ಯಾರ್ಥಿಗಳು ಅಧ್ಯಾಪಕರ ಸಲಹೆ ಪಡೆದು ಜೀವನದಲ್ಲಿ ಯಶಸ್ವಿ ಗಳಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ತುಂಬೆ ವಾರ್ಷಿಕ ಸ್ಮರಣೆ ಸಂಚಿಕೆ ಪ್ರಧಾನ ಸಂಪಾದಕ ಡಾ.ಜಿ.ತಿಪ್ಪೇಸ್ವಾಮಿ ಮಾತನಾಡಿ, 2017ರಲ್ಲಿ ಸ್ಮರಣೆ ಸಂಚಿಕೆಯನ್ನು ತುಮಕೂರು ಕುಲಸಚಿವರಾಗಿದ್ದ ಡಾ.ಪರಮಶಿವಮೂರ್ತಿ ಅವರು ಬಿಡುಗಡೆಗೊಳಿಸಿದ್ದರು.ಇಂದು 2024ರಲ್ಲೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲು ಕನ್ನಡ ವಿವಿ.ಹಂಪಿಯ ಕುಲಪತಿಗಳಾಗಿ ಬಂದಿರುವ ನಮಗೆಲ್ಲಾ ಹರ್ಷತಂದಿದೆ. ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ದೂರದೃಷ್ಟಿ ಇಟ್ಟುಕ್ಕೊಂಡು ಇಂಹಹ ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸಿದೆ. ವಿದ್ಯಾರ್ಥಿಗಳಾಗಿದ್ದಾಗಲೇ ತಮ್ಮ ನೈಪುಣ್ಯತೆಯನ್ನು ಸಮಾಜಕ್ಕೆ ತೋರಿಸುವ ವೇದಿಕೆಗೆ ಇಂದು ಒಂದು ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ಸ್ಮರಣ ಸಂಚಿಕೆಯ ಭಾಗವಾಗಿ ತಾವು ಗುರುತಿಸಿಕೊಳ್ಳುವುದರತ್ತ ಮುಖಮಾಡಬೇಕೆಂದು ಕರೆ ಕೊಟ್ಟರು.
ಈ ಸ್ಮರಣ ಸಂಚಿಕೆ ಸುಮಾರು 125ಕ್ಕೂ ಹೆಚ್ಚು ಲೇಖನಗಳು ಬಂದಿದ್ದವು. ಸಂಪಾದಕ ಮಂಡಳಿಯು ಅಗತ್ಯವಿರುವ ಹಾಗೂ ಪ್ರಸ್ತುತ ಉಪಯುಕ್ತ ಎನಿಸುವ ಲೇಖಗಳನ್ನು ಆಯ್ದುಕೊಂಡು ಮುದ್ರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳುವ ಬದಲು ಸಿಕ್ಕ ಅವಕಾಶದಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾದ ಪದ್ಮನಾಭ, ಡಾ.ಅನುಸೂಯ, ಡಾ.ಯೋಗೇಶ್, ರೇಣುಕಾ ಪ್ರಸಾದ್ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ದೇಶದ ಅತ್ಯುತ್ತಮ ಪ್ರಜೆಗಳು, ಬೇಕಾದ ಅರ್ಹತೆಯನ್ನು ಬೆಳೆಸಿಕೊಳ್ಳಬೇಕು. ಸಂಕೋಚಬಿಟ್ಟು ಸಾಧನೆ ಮಾಡಲು ಮುಂದೆ ಬರಲು ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕಿದೆ.
- ಡಾ.ಪರಮಶಿವಮೂರ್ತಿ ಕುಲಪತಿಗಳು, ಕನ್ನಡ
ವಿವಿ.ಹಂಪಿ