ತುಮಕೂರು:ಭಾಷೆಯು ಪ್ರಾಣಿ ಸಮೂಹದಿಂದ ಮಾನವನನ್ನು ಬೇರ್ಪಡಿಸಿದೆ.ಭಾಷೆ ಮನುಷ್ಯನನ್ನು ಬುದ್ಧಿಜೀವಿಯನ್ನಾಗಿ ಮಾಡಿದೆ.ಮೊದಲು ಸನ್ನೆಗಳಾಗಿ ನಂತರ ಲಿಪಿಯಾಗಿ ಮುಂದೆ ಬರವಣಿಗೆಯಾಗಿ ಮಾನವನ ಭಾವನೆಗಳನ್ನು ವಿನಿಮಯ ಮಾಡಲು ಭಾಷೆಯ ಅವಶ್ಯಕತೆ ತುಂಬಾ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್ ಸಿದ್ದಲಿಂಗಪ್ಪನವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಗಂಗಾ ಕಲಾ ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಕನ್ನಡ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಮತ್ತು ಐ.ಕ್ಯು.ಎ.ಸಿ.ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ,ಭಾಷೆ ಯಾದೃಚಿಕ ಧ್ವನಿ ಸಂಕೇತಗಳಿoದ ಕೂಡಿದೆ.ಕನ್ನಡ ಭಾಷೆ ತುಂಬಾ ಮಹತ್ವವಾದದ್ದು.ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ.ನಿರಂತರವಾಗಿ ಬದಲಾವಣೆಗೆ ಒಡ್ಡಿಕೊಂಡೆ ಬಂದಿದೆ.ಪೂರ್ವದ ಹಳಗನ್ನಡ,ಹಳಗನ್ನಡ,ನಡುಗನ್ನಡ,ಆಧುನಿಕ ಕನ್ನಡದ ಕಾಲಘಟ್ಟದಲ್ಲಿ ಶ್ರೀಮಂತ ಭಾಷೆಯಾಗಿದೆ.ಭಾಷೆಯ ಬಳಕೆ ಇಂದು ಕಡಿಮೆಯಾಗುತ್ತಿರುವುದು ಆತಂಕದ ವಿಷಯವಾಗಿದೆ.ಸರ್ಕಾರಿ
ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬoದಿರುವುದು ವಿಷಾದನೀಯವಾದ ಸಂಗತಿ ಕನ್ನಡ ಭಾಷೆ ಪದ ಸಂಪತ್ತು ತುoಬಾ ಹೆಚ್ಚಾಗಿದೆ,ಅದನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿoಗಪ್ಪನವರು, ಕನ್ನಡ ಭಾಷೆಯು 2000 ವರ್ಷಗಳ ಇತಿಹಾಸವನ್ನು ಹೊಂದಿದೆ.ಭಾಷೆ ಸದಾ ಚಲನಶೀಲವಾಗಿರಬೇಕು,ನಿಂತ ನೀರಾಗಬಾರದು.ಹರಿಯುವ ನದಿಯಂತಾಗಬೇಕು.ಮಾತೃಭಾಷೆ ಬರಿ ಮನೆಯಲ್ಲಿ ಮಾತ್ರವಾಗದೆ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ಬಳಸುವoತಾಗಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪದ್ಮಜಾ.ವೈ.ಎಮ್ ರವರು ಪ್ರಸ್ತಾವಿಕ ನುಡಿಗಳನಾಡುತ್ತ,ಭಾಷೆ ಮಾನವನ ವ್ಯಕ್ತಿತ್ವವನ್ನು ತಿಳಿಸುತ್ತದೆ.ಆದ್ದರಿಂದ ಮಾನವ ಹದವರಿತು ಮಾತುಗಳನ್ನಾಡಬೇಕು.ಭಾಷೆಯ ಮೂಲಕ ಇಡೀ ಸಮಾಜವನ್ನು ತಲುಪಬಹುದು.ಕನ್ನಡ ಬರಿ ಭಾಷೆಯಲ್ಲ ಅದೊಂದು ಸಂಸ್ಕೃತಿ. ಭಾಷೆ ಅಂದಿನಿoದಲೂ ಇಂದಿನ ತನಕವೂ ತನ್ನ ಸತ್ವವನ್ನು ಕಾಪಾಡಿಕೊಂಡಿದೆ ಎಂದು ತಿಳಿಸಿದರು.
ಐಕ್ಯೂಎಸ್ಸಿ ಸಂಯೋಜಕರಾದ ಪ್ರೊ.ಎಚ್.ಜಿ.ಸರ್ವಮoಗಳ,ಕನ್ನಡ ವಿಭಾಗದ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
———–ಚಂದ್ರಚೂಡ ಕೆ.ಬಿ