ತುಮಕೂರು:ಸ್ವಂತ ಖರ್ಚಿನಲ್ಲಿ 51 ವಿದ್ಯಾರ್ಥಿಗಳನ್ನು ವಿಮಾನ ಪ್ರಯಾಣ ಮಾಡಿಸುತ್ತಿರುವ ಹರಳೂರು ಶಾಲೆಯ ಶಿಕ್ಷಕ-ವ್ಯಾಪಕ ಪ್ರಶಂಶೆ

ತುಮಕೂರು:ತಾನು ಕೆಲಸ ನಿರ್ವಹಿಸುವ ಶಾಲೆಯ 51 ಮಕ್ಕಳು ಮತ್ತು 8 ಜನ ಶಾಲಾ ಸಿಬ್ಬಂದಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸುತ್ತಿರುವ ಶಿಕ್ಷಕರ ಸೇವೆಯನ್ನು ಜನರು ಅಭಿಮಾನದಿಂದ ಕೊಂಡಾಡುತ್ತಿದ್ದಾರೆ.

ಮಾಗಡಿ ತಾಲೂಕು ಕುದೂರು ಹೋಬಳಿ ಕಣನೂರುಪಾಳ್ಯದ ಶಿಕ್ಷಕ ರಾಜಣ್ಣ ತಮ್ಮ ಸಂಬಳದ ಉಳಿತಾಯದ ಹಣದಲ್ಲಿ 2 ಲಕ್ಷದ 76 ಸಾವಿರ ರೂಗಳನ್ನು ಖರ್ಚು ಮಾಡಿ ತಮ್ಮ ಶಾಲೆಯ ಕನ್ನಡ ಮಾಧ್ಯಮದ 8, 9,10 ನೇ ತರಗತಿಯ ಮಕ್ಕಳನ್ನು ಮಹಾರಾಷ್ಟ್ರದ ಪೂನಾಕ್ಕೆ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಬಳಿಯಿರುವ ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ರಾಜಣ್ಣರವರ ಸೇವೆಗೆ ಮಕ್ಕಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜಣ್ಣರವರು ಕಾರ್ಯ ನಿರ್ವಹಿಸುವ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳಾದರು ನಮ್ಮ ಹಳ್ಳಿಗಾಡಿನ ಶಾಲಾ ಮಕ್ಕಳು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಲೆಗೆ ಕರೆತಂದು ಸಂವಾದ ಮಾಡಿಸುತ್ತಾರೆ. ಸಾಲುಮರದ ತಿಮ್ಮಕ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಲನಚಿತ್ರ ವಿಭಾಗ,ಅಧ್ಯಾತ್ಮಕ್ಷೇತ್ರ, ಮಾಧ್ಯಮರಂಗ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ಅವರ ಅನುಭವವನ್ನು ಕೇಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಓದುವ ಸಂದರ್ಭದಲ್ಲೇ ಮಕ್ಕಳು ವಿಮಾನ ಪ್ರಯಾಣವನ್ನು ಒಮ್ಮೆಯಾದರು ಮಾಡಬೇಕು. ಏಕೆಂದರೆ ನಾನು ಚಿಕ್ಕಂದಿನಲ್ಲಿ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹಾರಾಡಬೇಕು ಎಂಬ ಆಸೆಯಿತ್ತು. ಆಗದೇ ಇದ್ದಾಗ ಬಹಳ ಸಂಕಟ ಪಟ್ಟಿದ್ದೆ. ಇಂತಹ ಸಂಕಟ ನಮ್ಮ ಮಕ್ಕಳು ಪಡಬಾರದು. ಅದಕ್ಕಾಗಿ ಒಮ್ಮೆಯಾದರು ಅವರನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು. ಮನುಷ್ಯ ಎತ್ತರಕ್ಕೆ ಹೋದಾಗ ಅವನ ಸಣ್ಣತನಗಳೆಲ್ಲಾ ಗೊತ್ತಾಗುತ್ತದೆ. ಮಕ್ಕಳ ಆಲೋಚನೆಗಳು ಎತ್ತರಕ್ಕೆ ಬೆಳೆಯಬೇಕು ಅದಕ್ಕಾಗಿ ಇಂತಹ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಮಕ್ಕಳಿಂದ ಇದುವರೆಗೂ ನಾನು ಸಂಬಳ ಪಡೆಯುತ್ತಿದ್ದೇನೆ. ಅದರಲ್ಲಿ ಒಂದು ಬಾಗವನ್ನಷ್ಟೇ ಮಕ್ಕಳಿಗೆ ಖರ್ಚು ಮಾಡುತ್ತಿದ್ದೇನೆ ಎಂಬುದೇ ನನಗೆ ಖುಷಿ ತರುವಂತದಾಗಿದೆ ಎoದು ರಾಜಣ್ಣ ಖುಷಿಯಿಂದ ವಿವರಿಸುತ್ತಾರೆ.

ಮಕ್ಕಳು ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬರವರ ಆಶ್ರಮಕ್ಕೆ ಭೇಟಿ ನೀಡಿ ಗುರುದರ್ಶನ ಮಾಡಬೇಕೆಂದು ಅಲ್ಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದರು. ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಜೊತೆಗೆ ಬಿಸಿಯೂಟ ತಯಾರಿಸುವ ತಾಯಂದಿರು ಮತ್ತು ಶಾಲೆಯಲ್ಲಿ ಕಸ ಹೊಡೆದು ಶಾಲೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಸಿಬ್ಬಂದಿಯನ್ನು ರಾಜಣ್ಣ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.

ಸಂಸ್ಕೃತ ವಿಶ್ವವಿದ್ಯಾಲಯ ಮಂಜೂರಾತಿಗೆ ರಾಜಣ್ಣರ ಶ್ರಮ ಹೆಚ್ಚಿನದಾಗಿದ್ದು,ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಣ್ಣನವರು ಸಾಲುಮರದ ತಿಮ್ಮಕ್ಕ ಪರಿಸರ ಪ್ರಶಸ್ತಿ, ಉತ್ತಮ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.

Leave a Reply

Your email address will not be published. Required fields are marked *

× How can I help you?