ತುಮಕೂರು-ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ‘ರಾಮಾಚಾರಿ’ 750 ಸಂಚಿಕೆಗಳ ಮೈಲುಗಲ್ಲನ್ನು ದಾಟಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ‘ಸೀರಿಯಲ್ ಸಂತೆ’ ಕಾರ್ಯಕ್ರಮ ನಡೆಯಲಿದೆ.
ತನ್ನ ಯಶಸ್ಸಿಗೆ ಕಾರಣರಾದ ವೀಕ್ಷಕರಿಗೆ ಧನ್ಯವಾದ ಸಲ್ಲಿಸುವ ಉದ್ದೇಶದ ಈ ಮನರಂಜನಾ ಕಾರ್ಯಕ್ರಮ, ಇದೇ ಶನಿವಾರ ಅಂದರೆ ಡಿಸೆಂಬರ್ 28ರ ಸಂಜೆ ಐದು ಗಂಟೆಗೆ ತುಮಕೂರಿನ ಬಿ.ಎಚ್ ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಕಲರ್ಸ್ ಕನ್ನಡದ ‘ಸೀರಿಯಲ್ ಸಂತೆ’ ವೀಕ್ಷಕರಿಗೆ ತಮ್ಮ ನೆಚ್ಚಿನ ನಟನಟಿಯರನ್ನು ಹತ್ತಿರದಿಂದ ಕಂಡು ಒಡನಾಡುವ ವಿಶೇಷ ಅವಕಾಶಕ್ಕೆ ವೇದಿಕೆ ಕಲ್ಪಿಸುತ್ತದೆ.ಧಾರಾವಾಹಿಯ ನಾಯಕ ರಿತ್ವಿಕ್ ಕೃಪಾಕರ್ ಮತ್ತು ತಂಡ ಅದ್ಧೂರಿ ನೃತ್ಯಗಳ ಮೂಲಕ ಜನರನ್ನು ರಂಜಿಸಲು ತಯಾರಾಗಿದ್ದಾರೆ. ಮೌನ ಗುಡ್ಡೆಮನೆ, ಅಂಜಲಿ ಸುಧಾಕರ್, ಐಶ್ವರ್ಯ ವಿನಯ್, ಹರೀಶ್ ಭಟ್, ಭರತ್, ನಿಮಿಶಾಂಭ ಅಜ್ಜಿ ಮತ್ತು ಝಾನ್ಸಿ ಕಾವೇರಪ್ಪ ಇವರೆಲ್ಲರೂ ಅಂದಿನ ಸಂಜೆಗೆ ರಂಗು ತುಂಬಲಿದ್ದಾರೆ.
ಒಬ್ಬ ಜವಾಬ್ದಾರಿಯುತ ಹೆಂಡತಿಯಾಗಿ, ಪ್ರೀತಿ ತುಂಬಿದ ಸೊಸೆಯಾಗಿ, ನಿಸ್ವಾರ್ಥ ತಾಯಿಯಾಗಿ, ಮಮತಾಮಯಿ ಅತ್ತೆಯಾಗಿ ಜಾನಕಿ ಪಾತ್ರ ಜನರ ಮನಮುಟ್ಟಿದ್ದು, ಇದನ್ನು ಸಂಭ್ರಮಿಸಲು ತಂಡ ತಯಾರಿ ಮಾಡಿಕೊಂಡಿದೆ. ಸಹಸ್ರಾರು ವೀಕ್ಷಕರಿಗೆ ಈ ಪಾತ್ರ ಸ್ಫೂರ್ತಿಯ ಸೆಲೆಯಾಗಿರುವುದನ್ನು ಮರೆಯಲಾಗದು.
ಅದ್ದೂರಿ ಮೆರವಣಿಗೆ
ಚಾರಿತ್ರಿಕ ಕೋಟೆ ಆಂಜನೇಯನ ಗುಡಿಯಿಂದ ಬೆಳಗ್ಗೆ 8ಕ್ಕೆ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ರಾಮಾಚಾರಿ ಧಾರಾವಾಹಿಯ ತಾರೆಯರು ಭಾಗವಹಿಸುವುದರೊಂದಿಗೆ ಸಂತೆಗೆ ಚಾಲನೆ ದೊರೆಯಲಿದೆ. ಅವರೊಂದಿಗೆ ಸ್ಥಳೀಯ ಕಲಾವಿದರ ಡೊಳ್ಳು ಕುಣಿತವೂ ಸೇರಿ ಸಂಭ್ರಮ ಹೆಚ್ಚಲಿದೆ. ತುಮಕೂರಿನ ಬೀದಿಗಳಲ್ಲಿ ಸಾಗುವ ಈ ಮೆರವಣಿಗೆ ಕೊನೆಗೆ ಕಾಲೇಜ್ ಮೈದಾನವನ್ನು ತಲುಪಲಿದೆ.
‘
‘ನೂರು ಜನ್ಮಕೂ’ ತಾರೆಯರ ಮೆರಗು
ರಾಮಾಚಾರಿ ಸೀರಿಯಲ್ ಸಂತೆಯ ಮೆರುಗು ಹೆಚ್ಚಿಸಲು ಹೊಸ ಧಾರಾವಾಹಿ ‘ನೂರು ಜನ್ಮಕೂ’ ತಂಡವೂ ಕೈಗೂಡಿಸಲಿದೆ. ಅತೀಂದ್ರಿಯ ಶಕ್ತಿಗಳ ಕತೆ ಹೊಂದಿದ ರೋಮಾಂಚಕ ಧಾರಾವಾಹಿ ‘ನೂರು ಜನ್ಮಕೂ’ ದ ತಾರೆಯರಾದ ಧನುಷ್ ಗೌಡ, ಶಿಲ್ಪಾ ಕಾಮತ್ ಮತ್ತು ಚಂದನ್ ಗೌಡ ಇಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ದುಷ್ಟ ಅಟ್ಟಹಾಸದಿಂದ ಗಂಡನನ್ನು ಕಾಪಾಡುವ ಹೆಣ್ಣು ಮೈತ್ರಿಯ ಕತೆಯನ್ನು ಮನ ಮುಟ್ಟುವಂತೆ ಹೇಳುವ ‘ನೂರು ಜನ್ಮಕೂ’ ಈಗಾಗಲೇ ವೀಕ್ಷಕರ ಹೃದಯ ಗೆದ್ದಿದೆ.
ಇದಲ್ಲದೆ ಬಿಗ್ ಬಾಸ್ ಖ್ಯಾತಿಯ ಅನುಷಾ ರೈ ಕೂಡ ರಾಮಾಚಾರಿ ಸೀರಿಯಲ್ ಸಂತೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಸಂಜೆಯ ಹವೆಗೆ ಬಿಸಿಯೇರಿಸಲಿದೆ. ತುಮಕೂರಿನವರೇ ಆದ ಅನುಷಾ ಉಪಸ್ಥಿತಿಯಿಂದ ಜನರ ಉತ್ಸಾಹ ಹೆಚ್ಚುವುದರಲ್ಲಿ ಸಂಶಯವಿಲ್ಲ.
ಸುಪರ್ ಹಿಟ್ ಕಾಮಿಡಿ ಶೋ ಗಿಚ್ಚಿಗಿಲಿಗಿಲಿಯ ಜನಪ್ರಿಯ ಮುಖಗಳಾದ ಪ್ರಶಾಂತ್, ಶಿವು, ನಂದೀಶ್, ಅಮೃತಾ ಮತ್ತು ವಿನೋದ್ ಗೊಬ್ಬರಗಾಲ ನೆರೆದ ಜನರನ್ನು ನಗಿಸಲು ಸಜ್ಜಾಗಿರುವುದು ಅಂದಿನ ಮತ್ತೊಂದು ವಿಶೇಷ.
ಇವಿಷ್ಟೇ ಅಲ್ಲದೆ, ವೀಕ್ಷಕರು ಪಾಲ್ಗೊಳ್ಳುವ ಮಿಸ್ಡ್ ಕಾಲ್ ನಂತ ಚಟುವಟಿಕೆಗಳೂ ಸಡಗರವನ್ನು ಹೆಚ್ಚಿಸಲು ತಮ್ಮ ಕಾಣಿಕೆ ನೀಡಲಿವೆ. ಒಬ್ಬ ಅದೃಷ್ಟಶಾಲಿ ವೀಕ್ಷಕರಿಗೆ ದೊಡ್ಡ ಟಿವಿಯೊಂದು ಬಹುಮಾನವಾಗಿ ಸಿಗಲಿದೆ.
ಇಷ್ಟೆಲ್ಲಾ ಮನರಂಜನೆಯನ್ನು ತಪ್ಪಿಸಿಕೊಳ್ಳಬೇಡಿ. ತುಮಕೂರಿನಲ್ಲಿ ನಡೆಯುವ ರಾಮಾಚಾರಿ ಸೀರಿಯಲ್ ಸಂತೆಯಲ್ಲಿ ಮರೆಯದೆ ಪಾಲ್ಗೊಳ್ಳಿ.
ಕಲರ್ಸ್ ಕನ್ನಡ
ಕಲರ್ಸ್ ಕನ್ನಡ ಒಂದು ಕುಟುಂಬ ಮನರಂಜನಾ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ನೂರು ಜನ್ಮಕೂ, ಗಿಚ್ಚಿ- ಗಿಲಿ ಗಿಲಿ, ರಾಜಾ-ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್‌ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲವು.