ತುಮಕೂರು:ಕಾನೂನು ಬಲ್ಲವರಾದ ನೀವುಗಳು ಹಳ್ಳಿಗಳಿಗೆ ತೆರಳಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಿ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ವಕೀಲರಿಗೆ ಸಲಹೆ ನೀಡಿದರು.
ತುಮಕೂರು ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ವಕೀಲರ ಸಂಘ(ರಿ) ಮತ್ತು ಕರ್ನಾಟಕ ಲೋಕಾಯುಕ್ತ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ವಕೀಲರ ಪಾತ್ರ ಕುರಿತು ಅವರು,ಮಾತನಾಡಿದರು’
ಕಪ್ಪು ಕೋಟು ಹಾಕಿಕೊಂಡವರ ಮೇಲೆ ಸಮಾಜದಲ್ಲಿ ಭಯ ಮತ್ತು ಗೌರವ ಎರಡೂ ಇರುತ್ತದೆ. ಕೋಟು ಹಾಕಿಕೊಂಡ ಮೇಲೆ ನ್ಯಾಯಾಲಯದಲ್ಲಿ ವಾದ ಮಾಡಿದಂತೆಯೇ ಸಾರ್ವಜನಿಕ ಜೀವನಕ್ಕೂ ನಾವು ತೆರೆದುಕೊಳ್ಳಬೇಕು.ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಪೀಠಕ್ಕೆ ಆಗಮಿಸುವುದು ತಡವಾದರೆ ನೀವು ಪ್ರಶ್ನೆ ಮಾಡುತ್ತೀರಿ.ಆದರೆ ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಗಂಟೆಗಟ್ಟಲೆ ಕೂತಿರುತ್ತೀರಿ.ಅಲ್ಲಿಯೂ ಪ್ರಶ್ನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಅಲ್ಲಿಯೂ ಸಹ ಪ್ರಕರಣಗಳ ಇತ್ಯರ್ಥ ವಿಳಂಬವಾಗುವುದಿಲ್ಲ ಎಂದವರು ಸಲಹೆ ನೀಡಿದರು.
ಕಕ್ಷಿದಾರರು ನಿಮ್ಮನ್ನೇ ನಂಬಿ ಬಂದಿರುತ್ತಾರೆ. ಅವರಿಗೆ ನೋವಾಗದಂತೆ ನಡೆದುಕೊಳ್ಳಬೇಕು. ಕಕ್ಷಿದಾರರ ಹಿತ ಕಾಪಾಡುವತ್ತ ಗಮನ ಹರಿಸಬೇಕು. ಬರುವವರಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಅವರ ಮನಸ್ಥಿತಿ ನೋಡಿಕೊಂಡು ಕಾರ್ಯನಿರ್ವಹಿಸುವoತೆ ವಕೀಲರಿಗೆ ಉಪ ಲೋಕಾಯುಕ್ತರು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ,ನ್ಯಾಯಾಲಯಕ್ಕೆ ಹೆಚ್ಚಿನ ಜಾಗದ ಅವಶ್ಯಕತೆ ಇದೆ. ಯಲ್ಲಾಪುರದ ಬಳಿ ಕೇಂದ್ರೀಯ ವಿದ್ಯಾಲಯದ ಸಮೀಪ 35 ಎಕರೆ ಜಾಗ ಇದೆ. ಇದರಲ್ಲಿ 25 ಎಕರೆ ಜಾಗವನ್ನು ನ್ಯಾಯಾಲಯಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ
ಮನವಿ ಮಾಡಲಾಗಿದೆ. ಅಲ್ಲದೆ ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್, ಸೋಮವಾರ ದಿoದ ಖಾಲಿಯಾಗುತ್ತಿರುವುದರಿಂದ ಆ ಜಾಗವನ್ನು ಸಹ ಬಿಟ್ಟು ಕೊಟ್ಟರೆ ನ್ಯಾಯಾಲಯ ಸಂಕೀರ್ಣಕ್ಕೆ ಅನುಕೂಲವಾಗುತ್ತದೆ ಎಂದು ಉಪಲೋಕಾಯುಕ್ತರಲ್ಲಿ ಮನವಿ ಮಾಡಿದರು.
ನ್ಯಾಯಾಲಯದ ಆವರಣದಲ್ಲಿ ಗಣೇಶ ದೇವಸ್ಥಾನ ಕಟ್ಟಲು 60*30 ಸ್ಥಳಾವಕಾಶವನ್ನು ಉಚ್ಛನ್ಯಾಯಾಲಯದಿಂದ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಗೆ ನೀವು ಪದೇ ಪದೇ ಭೇಟಿ ನೀಡಿದರೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಉಪಲೋಕಾಯುಕ್ತರಿಗೆ ಮನವಿ ಮಾಡಿದ್ದೇವೆ,ಫೋಕ್ಸೋ ಪ್ರಕರಣಗಳ ಬಗ್ಗೆಯೂ ಗ್ರಾಮೀಣ ಭಾಗದ ಮಹಿಳೆಯರು, ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿ, ಕಾನೂನು ತಿಳುವಳಿಕೆ ನೀಡಲು ಸಹ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಅರವಿoದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನೀಸ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ, ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್, ಟಿ.ಎಸ್.ಜನಾರ್ಧನ್,ಎಂ.ಬಿ.ನವೀನ್ ಕುಮಾರ್, ಎಸ್.ಮೋಹನ್,ಶಿವಕುಮಾರಸ್ವಾಮಿ, ಪಿ.ಎಸ್.ಸಂದೀಪ್,ಮoಜುಳ.ಹೆಚ್.ಎನ್,ಇತರರು ಉಪಸ್ಥಿತರಿದ್ದರು.
ವಕೀಲರಾದ ಎಸ್.ರಮೇಶ್ ಕಾರ್ಯಕ್ರಮ ನಿರೂಪಿಸಿದರು,ಕು.ಭಾರತಿ ಸ್ವಾಗತಿಸಿ,ಅಮೃತಾ ಪ್ರಾರ್ಥಿಸಿದರು.ಕಾರ್ಯಕ್ರಮದಲ್ಲಿ ಹಿರಿಯ,ಕಿರಿಯ,ಮಹಿಳಾ ವಕೀಲರು,ನ್ಯಾಯಾಧೀಶರುಗಳು
ಉಪಸ್ಥಿತರಿದ್ದರು.