ತುಮಕೂರು : ಶ್ರೀ-ರಾಮಕೃಷ್ಣ-ಪರಮಹಂಸರವರ-189ನೇ- ಜನ್ಮದಿನಾಚರಣೆ

ತುಮಕೂರು : ಶ್ರೀ ರಾಮಕೃಷ್ಣ ಪರಮಹಂಸರವರ 189ನೇ ಜನ್ಮದಿನಾಚರಣೆಯನ್ನು ಡಾ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ವತಿಯಿಂದ ರಾಮಕೃಷ್ಣ ಪರಮಹಂಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಡಾ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ. ನಿಧಿಕುಮಾರ್ ರಾಮಕೃಷ್ಣರ ಕುರಿತು ಮಾತನಾಡುತ್ತಾ ಶ್ರೀಯುತರು ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು, ದೇವಿ ಕಾಳಿಕಾಮಾತೆಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ನೇ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು. ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಸ್ಥಾಪಿಸಿದರು ಎಂದರು.

ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು “ಅವಿದ್ಯಾಮಾಯೆ” ಮತ್ತು “ವಿದ್ಯಾಮಾಯೆ” ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. “ಅವಿದ್ಯಾಮಾಯೆ” ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು ಎಂದು ತಿಳಿಸಿದರು.

ಮುಂದುವರೆದು ಮಾತನಾಡುತ್ತಾ ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ – ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದಂತಹ ಮಹಾನ್ ಪುರುಷರು ಇವರ ಬಗ್ಗೆ ಹೇಳುತ್ತಾ ಹೋದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ, ಅಂತಹ ಮಹಾನ್ ಚೇತನ ರಾಮಕೃಷ್ಣ ಪರಮಹಂಸರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್.ಬಿ.ಆರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲ್ಲಾಸ್ ಅಹಮದ್, ನಗರ ಗೌರವಾಧ್ಯಕ್ಷರಾದ ಮಹೇಶ್ ವಕ್ಕೋಡಿ, ತುಮಕೂರು ತಾಲ್ಲೂಕು ಅಧ್ಯಕ್ಷರಾದ ಜೆ.ಬಿ.ನೇಶನ್, ಅಲ್ಪಸಂಖ್ಯಾತರ ಘಟಕದ ನಗರ ಯುವ ಘಟಕ ಅಧ್ಯಕ್ಷರು ಮೋಯಿನ್ ಅಹಮದ್, ಪದಾಧಿಕಾರಿಗಳಾದ ಕಿರಣ್ ಕುಮಾರ್ ವೈ.ಎಸ್, ಆಸಿಫ್, ರಂಗಸ್ವಾಮಿಯ ಕೆ.ಎಸ್. ಕಿಸ್ತೂರು ನರಸಿಂಹಮೂರ್ತಿ ಇನ್ನು ಮುಂತಾದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?