ತುಮಕೂರು-2.49 ಕೋಟಿ ರೂ.-ವೆಚ್ಚದಲ್ಲಿ-ಪಾದಚಾರಿ-ಸುರಂಗ- ಮಾರ್ಗ-ಕಾಮಗಾರಿಗೆ-ವಿ.ಸೋಮಣ್ಣ-ಚಾಲನೆ

ತುಮಕೂರು- ನಗರದ ಶೆಟ್ಟಿಹಳ್ಳಿ ಹಳೆಯ ರೈಲ್ವೆ ಗೇಟ್ ಬಳಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು.


ನಗರದ ಶೆಟ್ಟಿಹಳ್ಳಿ ರೈಲ್ವೆಗೇಟ್‌ನಲ್ಲಿ ಈಗಾಗಲೇ ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗಿದ್ದು, ಈ ಕೆಳ ಸೇತುವೆ ಮೂಲಕ ವಾಹನಗಳ ಸಂಚರಿಸುತ್ತಿವೆ. ಆದರೆ ವಾಹನ ದಟ್ಟೆ ಇರುವ ಕಾರಣ ಅಂಡರ್‌ಪಾಸ್‌ನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟಕರವಾಗಿರುವುದನ್ನು ಮನಗಂಡ ಸಚಿವ ಸೋಮಣ್ಣ ಅವರು 2.49 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು.


ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ರಾಜ್ಯದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲೆವೆಲ್ ಕ್ರಾಸಿಂಗ್ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳಿಗೆ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುತ್ತಿದೆ ಎಂದರು.


ದೇಶಾದ್ಯಂತ ಎಲ್ಲ ಕಡೆಗಳಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ ಎಂದು ಅವರು ಹೇಳಿದರು.ಏಪ್ರಿಲ್ 30 ರೊಳಗೆ ಸುಮಾರು 7೦೦ ಕೋಟಿ ರೂ. ವೆಚ್ಚದಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗಳನ್ನು ಮುಂಬರುವ 2027 ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.


ನಾನು ಕೇಂದ್ರ ಸಚಿವನಾದ 9ತಿಂಗಳಲ್ಲಿ ಜಿಲ್ಲೆಯ ಬಹುತೇಕ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ಕೇವಲ ಕರ್ನಾಟಕವಲ್ಲದೆ ದೇಶದ ಇತರೆ ರಾಜ್ಯಗಳ ರೈಲ್ವೆ ಕಾಮಗಾರಿಗಳಿಗೂ ಪ್ರಧಾನಿ ನರೇಂದ್ರ ಮೋದಿಯವರು ಅನುದಾನ ನೀಡಿದ್ದಾರೆ ಎಂದರು.


ರೈಲ್ವೆ ಇಲಾಖೆ ರಕ್ಷಣಾ ಇಲಾಖೆಯ ಮತ್ತೊಂದು ಮುಖವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಇಂದು ಶಿಲಾನ್ಯಾಸ ನೆರವೇರಿಸಿರುವ ಪಾದಚಾರಿ ಸುರಂಗ ಮಾರ್ಗ ಹಾಗೂ ಭೀಮಸಂದ್ರದ ಬಳಿ ರೈಲ್ವೆ ಕೆಳ ಸೇತುವೆ ಕಾಮಗಾರಿಗಳನ್ನು ಮುಂದಿನ 7ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಅಮಿತೇಶ್‌ಕುಮಾರ್ ಸಿನ್ಹಾ, ಪರೀಕ್ಷಿತ್ ಮೋಹನ್ಪೂರಿಯಾ, ಕೃಷ್ಣಚೈತನ್ಯ, ಮಂಜುನಾಥ ಕನಮಡಿ, ರಾಜೀವ್ ಶರ್ಮಾ, ರವಿಶಂಕರ್ ಹೆಬ್ಬಾಕ,ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್,ಹೆಚ್.ಎಂ.ರವೀಶಯ್ಯ,ತರಕಾರಿಮಹೇಶ್,ಜಯನಗರ ನಾಗರೀಕ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?