ತುಮಕೂರು- ಕೃಷಿ ಇಲಾಖೆಯ ಅನುಮತಿ ಪಡೆಯದೆ ಕಳಪೆ ದರ್ಜೆಯ ಹರಳು ರೂಪದ ಎನ್‌ಪಿಕೆ ಮಿಶ್ರಣ ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ 1.15 ಲಕ್ಷ ರೂ. ಬೆಲೆ. 11.25 ಟನ್ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ತುರುವೇಕೆರೆ ಪಟ್ಟಣದ ಬಿ.ಎಸ್. ರಸ್ತೆಯಲ್ಲಿರುವ ಶ್ರೀ ಸ್ವಾಮಿ ಅಯ್ಯಪ್ಪ ಫರ್ಟಿಲೈಸರ್ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಇಲಾಖೆ ಅನುಮತಿ ಪಡೆಯದೆ ಕಳಪೆ ದರ್ಜೆಯ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ, ಅಶ್ವತ್ಥ್‌ನಾರಾಯಣ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ ವಿಜಾಪುರ ಜಿಲ್ಲೆಯ ಮೆ. ಶಾಂತಿ ಜೀವನ್ ಆಗ್ರೋ ಫುಡ್ಸ್ ರವರಿಂದ ಅನಧಿಕೃತವಾಗಿ ಸರಬರಾಜು ಆದ 225 ಬ್ಯಾಗ್ ಕಳಪೆ ದರ್ಜೆಯ ಹರಳು ರೂಪದ ರಸಗೊಬ್ಬರ ಮಾರಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು 1,15,425 ರೂ. ಬೆಲೆಯ 11.25 ಟನ್ ರಸಗೊಬ್ಬರವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ದಾಳಿಯಲ್ಲಿ ತುರುವೇಕೆರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಗಿರೀಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.