ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್‌ರವರ 78 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾದ ಇಂದ್ರುಕುಮಾರ್ ಡಿ.ಕೆ.ರವರು ಮಾತನಾಡಿ ತುಮಕೂರು ಗ್ರಾಮಾಂತರದ ಮಲ್ಲಸಂದ್ರದಲ್ಲಿ ಜನಿಸಿದ ಲಕ್ಷ್ಮಣ್‌ದಾಸ್‌ರವರು ನಮ್ಮ ಜಿಲ್ಲೆಯ ಹೆಸರಾಂತ ಕಲಾವಿದರಲ್ಲಿ ಒಬ್ಬರಾಗಿದ್ದಾರೆ, ಇವರ ಹೆಸರು ನಮ್ಮ ನಾಡಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕಾರ್ಯ ಇವರಿಂದ ಆಗಿದ್ದು, ಹಲವಾರು ದಶಕಗಳಿಂದ ಕಲಾ ಸರಸ್ವತಿಯ ಆರಾಧಕರಾಗಿ ಹಲವಾರು ಕಲಾವಿದರನ್ನು ಬೆಳಸಿದಂತಹ ಕೀರ್ತಿ ಇವರದ್ದಾಗಿದೆ, ಜೊತೆಗೆ ಕಲಾ ರತ್ನ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಇವರು ಹಲವಾರು ಯುವ ಕಲಾವಿದರಿಗೆ ಸ್ಪೂರ್ತಿದಾಯಕರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಕಲಾವಿದರಾದ ದಿಬ್ಬೂರು ಮಂಜು ಮಾತನಾಡಿ ಡಾ. ಲಕ್ಷ್ಮಣ್‌ದಾಸ್‌ರವರ ನಿತ್ಯ ಪರಿಶ್ರಮದಿಂದ ಹಾಗೂ ಅವರ ಕಲಾಸ್ಪೂರ್ತಿಯನ್ನು ಮೆಚ್ಚಿ ತುಮಕೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ, ಕನ್ನಡ ಕಲಾದೇವಿಯವರ ಪುತ್ರನಾಗಿ ತನ್ನ ಜೀವನವನ್ನು ಕಲೆಗಾಗಿ ಅರ್ಪಿಸಿ ಕಲಾ ದೇವಿಯ ಆರಾಧಕನಾಗಿ ಕರ್ನಾಟಕದ ಕಲಾ ರಂಗದಲ್ಲಿ ಮನೆ ಮಾತಾಗಿರುವ ಶ್ರೀಯುತರ ಶಿಷ್ಯನೆಂದು ನಾನು ಹೇಳಿಕೊಳ್ಳಲು ನನಗೆ ಹೆಮ್ಮೆದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಲಕ್ಷ್ಮಣ್‌ದಾಸ್‌ರವರ ಧರ್ಮಪತ್ನಿ ಲಕ್ಷ್ಮಿದೇವಮ್ಮ, ಸುನೀತ, ರಾಜಶೇಖರ್, ಲಕ್ಷ್ಮಿದೇವಮ್ಮ, ಶ್ರೀನಿವಾಸ್, ಸ್ನೇಹಜೀವಿ ಪರಮೇಶ್, ಮಂಜುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.