ತುಮಕೂರು-ಬಿಟ್ಟಿ ಭಾಗ್ಯಗಳ ಅಭಿವೃದ್ಧಿ ಶೂನ್ಯ ಸರ್ಕಾರ: ಶಾಸಕ ಸುರೇಶ್‌ಗೌಡ

ತುಮಕೂರು: ಕಾಂಗ್ರೆಸ್ ಸರ್ಕಾರದ ಸಾಧನೆಯ ಸಮಾವೇಶ ರಾಜ್ಯದ ಜನರ ಪಾಲಿನ ಮರಣಮೃದಂಗ. ಯಾವುದೇ ಜನಪರ ಕಾರ್ಯಕ್ರಮ, ಅಭಿವೃದ್ಧಿ ಯೋಜನೆ ಮಾಡದ ಸರ್ಕಾರ, ಬಿಟ್ಟಿ ಭಾಗ್ಯದ ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಶಾಸಕ ಬಿ.ಸುರೇಶ್‌ಗೌಡರು ಟೀಕಿಸಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಸುರೇಶ್‌ಗೌಡರು, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಸಾರುವ ಪೋಸ್ಟರ್ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕ ಸುರೇಶ್‌ಗೌಡ, ಸರ್ಕಾರದ ಜಾಹೀರಾತುಗಳಲ್ಲಿ ಕೇವಲ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತಿದೆ.ಇದರ ಹೊರತಾಗಿ ಸರ್ಕಾರದಿಂದ ಯಾವುದೇ ನೀರಾವರಿ ಯೋಜನೆ, ಶಾಲಾ ಕಟ್ಟಡ ನಿರ್ಮಾಣ, ಬಡವರಿಗೆ ಮನೆ ಕೊಡುವಂತಹ ಯಾವುದೇ ಜನಪರವಾದ ಕಾರ್ಯಕ್ರಮಗಳು ಆಗಿಲ್ಲ. ಎರಡು ವರ್ಷ ಸರ್ಕಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಒತ್ತಾಯಿಸಿದರು.

ಎರಡು ವರ್ಷಗಳ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಕಾಣದ ದುಸ್ಥಿತಿಗೆ ರಾಜ್ಯವನ್ನುದೂಡಿದೆ.ಇದು ಆಡಳಿತ ಸರ್ಕಾರವಲ್ಲ, ವಸೂಲಿ ಸರ್ಕಾರ.ಸರ್ಕಾರದ ಕಚೇರಿಗಳಲ್ಲಿ ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೂಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಜನರು ಬದುಕಲು, ಸಾಯಲೂ ಬಿಡದ ಕ್ರೂರ ಭ್ರಷ್ಟತೆ ರಾಜ್ಯವನ್ನು ಆವರಿಸಿದೆ. ಇದು 60 ಪರ್ಸೆಂಟ್ ಸರ್ಕಾರ.ಪ್ರತಿಯೊಂದು ಯೋಜನೆ, ಟೆಂಡರ್‌ನಲ್ಲೂ ಕಮೀಷನ್ ದಂಧೆ ನಡೆಯುತ್ತಿದೆ.ಪಕ್ಷದ ಹೈಕಮಾಂಡ್‌ಗೆ, ಇತರ ರಾಜ್ಯಗಳ ಚುನಾವಣೆಗೆ ಅಕ್ರಮವಾಗಿ ಹಣ ಕಳುಹಿಸಲು ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಎಟಿಎಂ ಮಾಡಿಕೊಂಡಿದೆ ಎಂದು ಆಪಾದಿಸಿದರು.

ರಾಜ್ಯ ಆರ್ಥಿಕ ದಿವಾಳಿಯ ಅಂಚಿನಲ್ಲಿದೆ. ಸರ್ಕಾರದ ಜನವಿರೋಧಿ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು, ನೀರು, ವಿದ್ಯುತ್, ಡೀಸೆಲ್ ಬೆಲೆ ಏರಿಕೆ, ವಿವಿಧತೆರಿಗೆ, ಶುಲ್ಕಗಳ ಮೂಲಕ ಸರ್ಕಾರ ಜನರನ್ನು ಹಿಂಸಿಸುತ್ತಿದೆ.ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ.ಹಿಂದೂಗಳ ಹತ್ಯೆ, ಲವ್ ಜಿಹಾದಿಗಳು, ಭಯೋತ್ಪಾದಕ ಚಟುವಟಿಕೆಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಪೊಲೀಸರ ಮೇಲೆಯೇ ಮಾಫಿಯಾಗಳು ಹಲ್ಲೆ ನಡೆಸುವ ಮಟ್ಟಿಗೆ ಕಾನೂನು ವ್ಯವಸ್ಥೆ ಕುಸಿದಿದೆ ಎಂದು ಟೀಕಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೇವಲ ವೋಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಸರ್ಕಾರ ಜನರ ತೆರಿಗೆ ಹಣವನ್ನು ಬಳಸಿಕೊಳ್ಳುತ್ತಿದೆ. ಬಿಟ್ಟಿ ಭಾಗ್ಯ, ಅಲ್ಪಸಂಖ್ಯಾತರ ಓಲೈಕೆ ಹೊರತಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮುಖ್ಯಂತ್ರಿ ಸಿದ್ದರಾಮಯ್ಯ ಹೇಳುವಂತೆ ರಾಜ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ವಾತಾವರಣ ಇಲ್ಲವೇ ಇಲ್ಲ ಎಂದರು.

ಮುಸ್ಲೀಮರ ತುಷ್ಠೀಕರಣ, ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ಹೊರಿಸಿರುವ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಪಾಲಿನ ದೊಡ್ಡವಿಲನ್ ಆಗಿದೆ ಎಂದು ಜಿ.ಬಿ.ಜ್ಯೋತಿಗಣೇಶ್ ಟೀಕಿಸಿದರು.

ಈ ವೇಳೆ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಸಂದೀಪ್‌ಗೌಡ, ಜ್ಯೋತಿತಿಪ್ಪೇಸ್ವಾಮಿ, ಎ.ಹೆಚ್.ಆಂಜನಪ್ಪ, ಜಿ.ಎಸ್.ಶಿವಕುಮಾರ್, ಕೆ.ವೇದಮೂರ್ತಿ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ರಾಜಶೇಖರ್ ಹಾಜರಿದ್ದರು.

ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *