ತುಮಕೂರು: ಮಾ. 21 ರಿಂದ ಏಪ್ರಿಲ್ 4 ರ ವರೆವಿಗೂ ರಾಜ್ಯದಲ್ಲಿ ನಡೆದ ಎಸ್.ಎಸ್.ಎಲ್. ಸಿ.ಪರೀಕ್ಷೆಯ ಫಲಿತಾಂಶದಲ್ಲಿ ನಗರದ ಸರ್ವೋದಯ ಶಿಕ್ಷಣ ಸಂಸ್ಥೆಯ ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ 625ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ ಮಾತನಾಡಿ, ಗಣಿತ, ವಿಜ್ಞಾನ ವಿಷಯಗಳು ನನಗೆ ತುಂಬಾ ಇಷ್ಟವಾದವು. ಆದರೆ ನನಗೆ ಸಮಾಜ ವಿಜ್ಞಾನ ಕಷ್ಟವಾಗುತ್ತಿತ್ತು. ಉಪನ್ಯಾಸಕರು ಕಥೆ ರೂಪದಲ್ಲಿ ಹೇಳಿಕೊಡುತ್ತಿದ್ದರು.ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಯನ್ನು ಮಾಡುತ್ತಿದ್ದೆ. ಶಿಕ್ಷಕರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲ ದಿನದಿಂದಲೂ ಪ್ರತಿ ದಿನ 2 ಗಂಟೆ ಓದಿದರೆ ಸಾಕು. ಅರ್ಥ ಮಾಡಿಕೊಂಡು ಓದಬೇಕು. ಮನೆಯಲ್ಲಿ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ವೈದ್ಯನಾಗಬೇಕೆಂಬ ಆಸೆಯಿದೆ ಎಂದು ತನ್ನ ಬಯಕೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ತಂದೆ ಮೊಹಮದ್ ಮನ್ಸೂರ್ ಆದೀಲ್ ಹಾಗೂ ತಾಯಿ ಹಫ್ರೋಜ್ ಜಹಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಸುಬ್ಬರಾವ್ ಮಾತನಾಡಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚೇತನ ವಿದ್ಯಾಮಂದಿರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದುವರೆಗೂ 2 ಮತ್ತು 3ನೇ ಸ್ಥಾನ ಬರುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣಕರ್ತರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಫಸ್ಟ್ ರ್ಯಾಂಕ್ ಜತೆಗೆ ಇನ್ನು 4 ರ್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಚೇತನ ವಿದ್ಯಾಮಂದಿರ ಸಂಸ್ಥೆಯ ಎಸ್.ಸುಬ್ಬರಾಯ,ಸುಬ್ಬರಾವ್,ಮುಖ್ಯ ಶಿಕ್ಷಕ ಜಿ.ಎಸ್.ಶ್ರೀನಿವಾಸಮೂರ್ತಿ, ಸಹ ಶಿಕ್ಷಕ ಜಿ.ಸುಧಾ,ರಾಜೇಶ್ವರಿ.ಆರ್, ಬಿ.ಎಸ್.ವಾಣಿ, ಎಸ್.ಜಯಮಾಲ,ಎಂ.ಸಿ.ಚಂದ್ರಕಲಾ ಅವರು ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ ರವರನ್ನು ಅಭಿನಂದಿಸಿದರು.
– ಕೆ.ಬಿ.ಚಂದ್ರಚೂಡ