ತುಮಕೂರು: 7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘದ ಕರೆಯ ಮೇರೆಗೆ ಅಧಿಕಾರಿ, ನೌಕರರು ಬುಧವಾರ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.
ಈ ಸಂಬಂಧ ನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದ ಅಧಿಕಾರಿ, ನೌಕರರು, ರಾಜ್ಯ ಸಂಘದ ವತಿಯಿಂದ ಸರ್ಕಾರಕ್ಕೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಬರುವ ಮೇ 26ರಂದು ಸಾಂದರ್ಭಿಕರಜೆ ಹಾಕಿ, ನ್ಯಾಯಯುತ ಬೇಡಿಕೆಗಳನ್ನು ಪಡೆಯುವ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ, ಅನಿವಾರ್ಯ ಕಾರಣಗಳಿಂದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿರುತ್ತದೆ ಎಂದು ಹೇಳಿದರು.
ಹಂತಹಂತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.ಮಹಾನಗರ ಪಾಲಿಕೆಗಳು ಖಾಯಂ ನೌಕರರ ವೇತನಾನುದಾನಕ್ಕೆ ನಿಗದಿತ ನಮೂನೆ ‘ಅಪೆಂಡಿಕ್ಸ್-ಬಿ’ಯಲ್ಲಿ ಸಲ್ಲಿಸಿದ್ದ ಬೇಡಿಕೆಯಲ್ಲಿ ಶೇ.85ರಷ್ಟು ಅನುದಾನವನ್ನು ಮಾತ್ರ ಹಂಚಿಕೆ ಮಾಡಿ ವ್ಯತ್ಯಾಸದ ಉಳಿಕೆ ಶೇ.15 ಅನುದಾನವನ್ನು ಮಹಾನಗರ ಪಾಲಿಕೆಗಳು ಕ್ರೋಢೀಕರಿಸಿದ ಸ್ವಂತ ಸಂಪನ್ಮೂಲಗಳಿಂದ ಭರಿಸಲು ಆರ್ಥಿಕ ಇಲಾಖೆಯ 2025-26ನೇ ಸಾಲಿನ ಆಯವ್ಯಯ ವೆಚ್ಚ ಸಂಪುಟ-04ರ ಟಿಪ್ಪಣಿಯಂತೆ ಪೌರಾಡಳಿತ ನಿರ್ದೇಶನಾಲಯದಿಂದ ಆದೇಶ ಹೊರಡಿಸಲಾಗಿದ್ದು, ಸದರಿ ಆದೇಶವನ್ನು ಹಿಂಪಡೆದು, ಖಾಯಂನೌಕರರ ವೇತನಾನುದಾನಕ್ಕೆ ಅವಶ್ಶವಿರುವ 100 ರಷ್ಟು ಸಂಪೂರ್ಣ ಅನುದಾನವನ್ನು ಎಸ್‌ಎಫ್‌ಸಿ ನಿಧಿಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಆದೇಶದಂತೆ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆ,ಕೆಜಿಐಡಿ ಯೋಜನೆ ಸೇರಿದಂತೆ ಎಲ್ಲವನ್ನೂ ಪಾಲಿಕೆಯ ನೌಕರರಿಗೆ ವಿಸ್ತರಿಸಬೇಕು,ಕೆಳೆದ ಜನವರಿ ತಿಂಗಳಿಂದ ನಮಗೆ ಸಂಬಳವಾಗಿಲ್ಲ ಜೀವನ ನಿರ್ವಹಣೆ ಮಾಡುವುದು ದುಸ್ತರವಾಗಿದೆ,ಮನೆಯಲ್ಲಿ ವಯಸ್ಸಾದ ಪೋಷಕರಿದ್ದಾರೆ,ಮಕ್ಕಳಿದ್ದಾರೆ,ಹೆಂಡತಿ ಮಕ್ಕಳನ್ನು ಸಾಕುವುದು ಹೇಗೆ?ಅವರ ಆರೋಗ್ಯ,ಬಾಡಿಗೆ,ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ ಎಂಬ ಬೇಸರವನ್ನು ಹೊರಹಾಕಿದರು.

ಸಂಘದ ಅಧ್ಯಕ್ಷ ಪ್ರಸನ್ನಕುಮಾರ್,ಉಪಾಧ್ಯಕ್ಷೆ ಪುಷ್ಪಲತ, ಪದಾಧಿಕಾರಿಗಳಾದ ಸಿದ್ಧಲಿಂಗಯ್ಯ, ಶೆಟ್ಟಳ್ಳಪ್ಪ, ಮಧು, ಸುನೀತಾ, ಮಹೇಶ್ ಬಾಬು, ವಿಜಯಕುಮಾರ್ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ