ತುಮಕೂರು : ದೇಶದ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿ ಅಭಿವೃದ್ಧಿಯತ್ತ ಮುಂದೆ ಸಾಗುತ್ತದೆ ಎಂದು ತುಮಕೂರು ವಿಭಾಗದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್ ತಿಳಿಸಿದರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಂಗಳವಾರ (ಇಂದು ) ಸಾಹೇ ವಿಶ್ವವಿದ್ಯಾನಿಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ `ಟಿಡಿಎಸ್ ಜಾಗೃತಿ’ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆ ಪಾವತಿಯ ವಿವಿಧ ಹಂತಗಳನ್ನು ವಿವರಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ದೇಶಕ್ಕೆ ತೆರಿಗೆಯನ್ನು ಕಟ್ಟೇ ಕಟ್ಟುತ್ತಾನೆ. ಅದು ಪ್ರತ್ಯಕ್ಷ ತೆರಿಗೆಯಾಗಲಿ ಇಲ್ಲ ಪರೋಕ್ಷ ತೆರಿಗೆಯೇ ಆಗಲಿ ಸಲ್ಲಿಸುತ್ತಾನೆ. ದೇಶ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಪ್ರಜೆಗಳಾದ ನಾವು ಸಲ್ಲಿಸುವ ತೆರಿಗೆ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಅರುಣ್ ಕುಮಾರ್ ಹೇಳಿದರು.
ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ ರವರು ಮಾತನಾಡಿ ನಾವು ದೇಶಕ್ಕೆ ಸಲ್ಲಿಸುವ ತೆರಿಗೆಯನ್ನು ದೇಶ ಸೇವೆ ಅಂದುಕೊಳ್ಳಬೇಕು. ಹಾಗಾಗಿ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸಲ್ಲಿಸಬೇಕು. ಆದಾಯ ತೆರಿಗೆಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮುಂದಿನ ಅಧ್ಯಯನಕ್ಕೆ ಬಹಳ ಸಹಕಾರಿಯಾಗುತ್ತದೆ ಎಂದು ತಿಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಇನ್ಸ್ ಪೆಕ್ಟರ್ ಸುನಿಲ್ ಗುಪ್ತಾ, ಸಾಹೇ ವಿ.ವಿ. ಪರೀಕ್ಷಾಂಗ ನಿಯಂತ್ರಕ ಡಾ.ಗುರುಶಂಕರ್, ಶ್ರೀಸಿದ್ಧಾರ್ಥ ದಂತ ವೈದ್ಯಕೀಯ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರವೀಣ್.ಡಿ.ಕುಡುವ, ಅಧೀಕ್ಷಕ ಡಾ.ವೆಂಕಟೇಶ್, ಎಸ್‌ಎಸ್‌ಎಂಸಿ ಹಣಕಾಸು ಅಧಿಕಾರಿಗಳಾದ ಭಾಸ್ಕರ್, ಎಸ್‌ಎಸ್‌ಐಬಿಎಂ ವಿಭಾಗದ ಪ್ರಾಂಶುಪಾಲ ಮಮತಾ.ಜಿ. ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ