ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ 889ನೇ ಬಸವೇಶ್ವರ ಜಯಂತಿಯನ್ನು ನಗರದ ಅಮಾನಿಕೆರೆಯ ಪಾರ್ಕ್ನಲ್ಲಿ ಆಚರಿಸಲಾಯಿತು.
ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡಿ, 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ, ದಾರ್ಶನಿಕ, ಸಾಂಸ್ಕೃತಿಕ ನಾಯಕ ವೀರ ಶರಣ ಜಗಜ್ಯೋತಿ ಬಸವಣ್ಣನವರ ಚಿಂತನೆಗಳು, ತತ್ವ ಆದರ್ಶಗಳು, ಇಂದಿಗೂ ಪ್ರಸ್ತುತ. ಸಾಮಾಜಿಕ ಸುಧಾರಣೆಗೆ ಅವರು ನೀಡಿರುವ ಕೊಡುಗೆಗಳು ಅಪಾರ, ಶಿವಶರಣರ ಒಗ್ಗೂಡುವಿಕೆಗೆ ರಚಿಸಿದ ಅನುಭವ ಮಂಟಪವು, ದೇಶದ ಸಂಸತ್ ಭವನ ನಿರ್ಮಾಣಕ್ಕೂ ಪ್ರೇರಣೆಯಾಗಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಪ್ರಶ್ನಿಸಿದ ಬಸವಣ್ಣನವರ ಅನೇಕ ವಚನಗಳು ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಕಾರಣವಾಗಿದೆ.

ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಸ್ಥಾನ ಪಡೆದು ಸರ್ವ ಧರ್ಮದ ಸಮಾನತೆಯನ್ನು ಸಾರಿ, ಬಡ ಜನತೆಗೆ ವಚನ ಸಾಹಿತ್ಯವನ್ನು ಪರಿಚಯಿಸುವಲ್ಲಿ ಬಸವಣ್ಣನವರು ಮೊದಲಿಗರು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವಾರು ಅನಿಷ್ಠ ಪದ್ಧತಿಗಳನ್ನು ವಚನ ಸಾಹಿತ್ಯದ ಮೂಲಕ ಖಂಡಿಸಿ ಜನರಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದರು. ಅಂತರ್ಜಾತಿ ವಿವಾಹ, ಸರಳ ಜೀವನ, ಕಾಯತತ್ವವನ್ನು ಪ್ರತಿಪಾದಿಸಿ ಸಮ ಸಮಾಜ ನಿರ್ಮಿಸಲು ಅಡಿಪಾಯ ಹಾಕಿದವರು ಬಸವಣ್ಣನವರು. ಅವರ ಸಾಮಾಜಿಕ ತತ್ವ ಆದರ್ಶಗಳು ಸಮಾನತೆಯ ಚಿಂತನೆಗಳು ಇಂದಿಗೂ ಪ್ರಸ್ತುತ ಜೀವನದ ಪಾಠವೂ ಹೌದು ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿರವರು ಮಾತನಾಡಿ, ಅಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಅಸ್ಪೃಶ್ಯತೆಯೆಂಬ ಮೌಢ್ಯವನ್ನು ತೊರೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ವಚನಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಇಂದಿಗೂ ಬಸವಣ್ಣನವರ ವಚನಗಳು ಪ್ರತಿಯೊಂದು ಕಾಲಘಟ್ಟಕ್ಕೂ ಅನ್ವಯಿಸುತ್ತಿವೆ ಎಂದರೇ ಅವರ ವಚನಾಮೃತದಲ್ಲಿನ ಮಹತ್ವ ಎಂತಹದ್ದು ಎಂದು ಪ್ರತಿಯೊಬ್ಬರು ಅರಿಯಬೇಕಾಗಿದೆಂದರು.
ಬಸವಣ್ಣನವರನ್ನು ಇಂದು ನಾವು ಪೂಜನೀಯ ಮಹತ್ವವನ್ನು ನೀಡಿರುವುದಲ್ಲದೇ, ಅವರ ವಚನದಲ್ಲಿನ ಸಾರವನ್ನು ನಮ್ಮ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರದ ಕಡತಗಳಲ್ಲಿ ಅಂದರೆ ಸರ್ಕಾರ ಹೊರಡಿಸುವ ಆದೇಶ, ಸುತ್ತೋಲೆ ಸೇರಿದಂತೆ ರಾಜ್ಯಾಂಗದ ಕಾರ್ಯಕಾಲಪಗಳಲ್ಲಿಯೂ ಸಹ ಉಲ್ಲೇಖವಾಗುತ್ತಿರುವುದು ಇಂದಿಗೂ ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿ ನಾರಾಯಣ ಎಸ್, ಜಿಲ್ಲಾ ಗೌರವಾಧ್ಯಕ್ಷರಾದ ರಾಜಣ್ಣ ಗೂಳೂರು, ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜು, ಅಲ್ಪ ಸಂಖ್ಯಾತರ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷರಾದ ಅಜೀಜ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ವೈ.ಎಸ್.ಕಿರಣ್ ಕುಮಾರ್, ನಗರಾಧ್ಯಕ್ಷರಾದ ಟಿ.ಎಲ್.ಮನು, ಭಾಷಾ, ಜಬಿನೇಷನ್, ಜಗದೀಶ್ (ಟೈಲರ್), ಹನುಮನರಸಯ್ಯ, ವಿಜಯ್ ಕುಮಾರ್, ರವಿಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.