ತುಮಕೂರು : ಜಿಲ್ಲೆಯ ತುಮಕೂರು, ಶಿರಾ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ಏಪ್ರಿಲ್ 16 ಹಾಗೂ 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(KCET) ನಡೆಯಲಿದ್ದು, ಪರೀಕ್ಷೆಯನ್ನು ಲೋಪದೋಷವಿಲ್ಲದಂತೆ ನಡೆಸುವ ಹಿನ್ನೆಲೆಯಲ್ಲಿ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಪರೀಕ್ಷಾ ಕಾರ್ಯ ವಿಧಾನಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ೨೫ ಕೇಂದ್ರಗಳಲ್ಲಿ ಕೆಸಿಇಟಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ವೇಳಾಪಟ್ಟಿ ಹಾಗೂ ಪರೀಕ್ಷಾರ್ಥಿಗಳ ಮಾಹಿತಿ ಲಭ್ಯವಿರಬೇಕು. ಪರೀಕ್ಷೆಗಾಗಿ ನಿಯೋಜಿಸಲಾದ ಅಧಿಕಾರಿ/ಸಿಬ್ಬಂದಿಗಳ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಅಗತ್ಯ ತರಬೇತಿ ನೀಡಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಅವರಿಗೆ ಸೂಚನೆ ನೀಡಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವ್ಯವಸ್ಥೆ ಮಾಡಿದಂತೆ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರವನ್ನು QR ಕೋಡ್ ಅನ್ನು ಸ್ಕ್ಯಾನಿಂಗ್ ಮೂಲಕ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಸಭೆಗೆ ಮಾಹಿತಿ ನೀಡುತ್ತಾ, ಏಪ್ರಿಲ್ 16ರಂದು ಭೌತಶಾಸ್ತç(ಬೆಳಿಗ್ಗೆ 10.30 ರಿಂದ 11.50 ಗಂಟೆವರೆಗೆ) ಹಾಗೂ ರಸಾಯನ ಶಾಸ್ತ್ರ (ಮಧ್ಯಾಹ್ನ 2.30 ರಿಂದ 3.50), ಏಪ್ರಿಲ್ 17ರಂದು ಗಣಿತಶಾಸ್ತ್ರ (ಬೆಳಿಗ್ಗೆ 10.30 ರಿಂದ 11.50 ಗಂಟೆವರೆಗೆ) ಹಾಗೂ ಜೀವಶಾಸ್ತ್ರ (ಮಧ್ಯಾಹ್ನ 2.30 ರಿಂದ 3.50 ) ಪರೀಕ್ಷೆಗಳು ನಡೆಯಲಿವೆ. ತುಮಕೂರಿನ 18 ಪರೀಕ್ಷಾ ಕೇಂದ್ರಗಳಲ್ಲಿ 7725 , ಶಿರಾ ತಾಲ್ಲೂಕಿನ 3 ಕೇಂದ್ರಗಳಲ್ಲಿ 1697 ಹಾಗೂ ತಿಪಟೂರು ತಾಲ್ಲೂಕಿನ 4 ಕೇಂದ್ರಗಳಲ್ಲಿ 2147 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11,570 ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮುಖ್ಯ ಅಧೀಕ್ಷರು ಸೇರಿದಂತೆ ಮತ್ತಿತರರು ಹಾಜರಿದ್ದರು.