ತುಮಕೂರು- ಮಾರ್ಚ್ 31-ರೊಳಗಾಗಿ-ಕೆರೆಗಳ-ಒತ್ತುವರಿಯನ್ನು-ತೆರವುಗೊಳಿಸಲು-ಡಿಸಿ-ಸೂಚನೆ

ತುಮಕೂರು : ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಗುರುತಿಸಿ ಮಾರ್ಚ್ ೩೧ರೊಳಗಾಗಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಕೈಗೊಳ್ಳುಬೇಕು. ಕೆರೆಗಳ ಅತಿಕ್ರಮಣ ಅಥವಾ ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ಒತ್ತುವರಿಯನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


ಕೈಗಾರಿಕೆಗಳು ಮತ್ತು ಜನವಸತಿ ಪ್ರದೇಶಗಳಿಂದ ಹರಿಯುವ ತ್ಯಾಜ್ಯ ಮತ್ತು ಮಲಿನಗೊಂಡ ನೀರು ಕೆರೆಗಳಿಗೆ ಸೇರಿ ಮಲಿನವಾಗದಂತೆ ಅಗತ್ಯ ಮುನ್ಸೂಚನೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.


ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ ಮುಂತಾದ ಇಲಾಖೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2061 ಕೆರೆಗಳಿದ್ದು, ಅದರಲ್ಲಿ 874 ಕೆರೆಗಳು ಒತ್ತುವರಿಯಿಂದ ಮುಕ್ತಗೊಂಡಿವೆ. ಒತ್ತುವರಿ ಗುರುತಿಸಿರುವ ಕೆರೆಗಳನ್ನು ತೆರವುಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದರು.


ಕೆರೆಗಳನ್ನು ಸಂರಕ್ಷಿಸುವಲ್ಲಿ ರೈತರ ಪಾತ್ರ ಮಹತ್ವದ್ದು. ಹಾಗಾಗಿ ಕೆರೆಗಳ ಒತ್ತುವರಿ ತೆರವಿಗಾಗಿ ರೈತರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಸಭೆಯ ಮೂಲಕ ಮನವಿ ಮಾಡಿದರು.


ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು

Leave a Reply

Your email address will not be published. Required fields are marked *

× How can I help you?