ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 39 ಮಂದಿ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಉಚಿತವಾಗಿ ಲ್ಯಾಪ್ ಟಾಪ್, ಬುಕ್ಕಾಪಟ್ಟಣ ವ್ಯಾಪ್ತಿಯ ಹತ್ತು ಮಂದಿಗೆ ಸ್ಮಾರ್ಟ್ ಪೋನ್‌ಗಳನ್ನು ವಿತರಿಸಿದರು.
ತಾಲ್ಲೂಕು ಕಚೇರಿಯಲ್ಲಿರುವ ಶಾಸಕರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ.

ಗ್ರಾಮ ಲೆಕ್ಕಿಗರು ತಮ್ಮ ಕಚೇರಿಯಲ್ಲೇ ಇದ್ದು ಎಲ್ಲಾ ಕೆಲಸಗಳನ್ನು ಮಾಡಲು ಮತ್ತು ಪ್ರತಿನಿತ್ಯ ತಾಲ್ಲೂಕು ಕಚೇರಿಗೆ ಹೋಗುವುದನ್ನು ತಪ್ಪಿಸಲು ಈ ಲ್ಯಾಪ್ ಟಾಪ್ ವಿತರಿಸಲಾಗಿದೆ. ಜನರಿಗೆ ಉತ್ತಮ ಸೇವೆ ನೀಡಲು ಲ್ಯಾಪ್ ಟಾಪ್ ಅನ್ನು ಬಳಸಿಕೊಳ್ಳಬೇಕು. ಗ್ರಾಮೀಣ ಜನರ ಜತೆ ನೇರ ಸಂಪರ್ಕ ಇರುವ, ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವತ್ತ ಕಂದಾಯ ಇಲಾಖೆಯು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಲುವಾಗಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಶಾಸಕ ಸುರೇಶ್ ಬಾಬು ಅವರು ಈ ಲ್ಯಾಪ್‌ಟಾಪ್‌ಗಳನ್ನು ನೀಡಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಶ್ಲಾಘಿಸಿದರು.

ಕಂದಾಯ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೂ ಹೆಚ್ಚು ಬಾಕಿಯಿರುವ ಕೇಸ್ ನಮ್ಮಲ್ಲಿ ಮಾತ್ರ. ಅನೇಕರು ಪಹಣಿ ಹೊಂದಿಲ್ಲ. ಸರ್ವೆ ನಂಬರ್ ಬಾಕಿಯಿದೆ. ಜನರಿಗೆ ಮಂಜೂರು ಮಾಡಿದ್ದರೂ ಅವರಿಗೆ ಜಮೀನು ಕೊಟ್ಟಿಲ್ಲವೆಂದು ದೂರುಗಳು ಬರುತ್ತಲೇ ಇವೆ. ಈ ನಿಟ್ಟಿನಲ್ಲಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗು ಗ್ರಾಮೀಣರಿಗೆ ಸರಕಾರಿ ಸೇವೆ ತಲುಪಿಸಲು ಗ್ರಾಮೀಣಾಭಿವೃದ್ದಿ ಇಲಾಖೆ ಹಾಗು ಕಂದಾಯ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ ಹಿಂದಿನ ಬಾರಿ ರಾಜ್ಯದಲ್ಲಿ ಪ್ರಥಮವಾಗಿ ಪಟ್ಟಣದ ಪೋಲೀಸ್ ಠಾಣೆಗೆ ನನ್ನ ಅನುದಾನದಡಿ ಜೀಪ್ ನೀಡಿಲಾಗಿದೆ. ನಂತರ ಅದನ್ನು ಹಲವರು ಅನುಸರಿಸಿದರು. ಈಗ ಟ್ರಸ್ಟ್ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಿ ಉಚಿತವಾಗಿ ಲ್ಯಾಪ್‌ಟಾಪ್ ಹಾಗು ಮೊಬೈಲ್‌ಗಳನ್ನು ವಿತರಿಸಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ ಭರಿಸಿದೆ. ಎಲ್ಲಾ ಇಲಾಖೆಯ ಮಾತೃ ಇಲಾಖೆ ಕಂದಾಯ ಇಲಾಖೆ. ಎಲ್ಲಾ ಹಂತಗಳಲ್ಲೂ ನೋಡಿದಾಗ ಕಂದಾಯ ಇಲಾಖೆಯನ್ನು ಜನರು ಅವಲಂಬಿಸಿದ್ದಾರೆ. ಜನಸೇವೆ ಮಾಡುವಾಗ ನೌಕರರು ಜನರ ಸಮಸ್ಯೆಯನ್ನು ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.

ಗ್ರಾಮ ಲೆಕ್ಕಿಗರು ವೃತ್ತಿಪೂರಕ ಮೂಲಭೂತ ಅವಶ್ಯಕತೆಗಳಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಶಾಸಕರು ನಮಗೆ ಲ್ಯಾಪ್ ಟಾಪ್ ನೀಡಿ ಶಕ್ತಿ ತುಂಬಿದ್ದಾರೆ. ಅವರಿಗೆ ಅಭಿನಂದನೆಗಳು. ಅವರ ಆಶಯಕ್ಕೆ ತಕ್ಕ ಹಾಗೆ ಕೆಲಸ ನಿರ್ವಹಿಸಿ ಇಲಾಖೆಯನ್ನು ಸಧೃಡಗೊಳಿಸುತ್ತೇವೆ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದರು.
ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪುರಂದರ್ ಮಾತನಾಡಿದರು. ಶಿರಾ ತಹಸೀಲ್ದಾರ್ ಸಚ್ಚಿದಾನಂದ, ಇಓ ದೊಡ್ಡಸಿದ್ದಯ್ಯ ಹಾಗು ಇತರರಿದ್ದರು.