ತುಮಕೂರು-ವಾಹನ ಚಾಲಕರು-ರಸ್ತೆ ನಿಯಮ-ತಿಳಿದು ಪಾಲನೆ ಮಾಡಿ-ಡಿ.ಸಿ.ಶುಭ ಕಲ್ಯಾಣ್-ಸಲಹೆ


ತುಮಕೂರು: ಪ್ರತಿಯೊಬ್ಬರೂ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ಹೊಂದಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ವಾಹನ ಚಲಾಯಿಸುವವರು ತಮ್ಮ ಸುರಕ್ಷತೆ ಜೊತೆಗೆ ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆ ಬಗ್ಗೆಯೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.


ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ನಗರದ ಆರ್‌ಟಿಓ ಕಚೇರಿ ಆವರಣದಲ್ಲಿ ಸಂಚಾರ ಸುರಕ್ಷತಾ ಜಾಗೃತಿಯ ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಚಾರ ನಿಯಮಗಳ ಜಾಗೃತಿ ನಿತ್ಯದ ಮಂತ್ರವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಈ ಬಾರಿ ರಸ್ತೆ ಸುರಕ್ಷಿತಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಕೆಲಸ. ವಾಹನ ಚಲಾವಣೆ ಮಾಡುವವರ ದೃಷ್ಟಿ ಆರೋಗ್ಯಕರವಾಗಿರಬೇಕು. ವಯೋವೃದ್ಧರಿಗೆ ಕಣ್ಣಿನ ಸಮಸ್ಯೆ ಬರಬಹುದು ಅಂತಹವರು ನೇತ್ರ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎನ್.ಜಿ.ಗಾಯತ್ರಿದೇವಿ ಮಾತನಾಡಿ, ಸುರಕ್ಷಿತ ಸಂಚಾರ ಪ್ರತಿಯೊಬ್ಬರ ಗುರಿಯಾಗಬೇಕು. ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲನೆ ಮಾಡಿಕೊಂಡು ಎಚ್ಚರವಹಿಸಬೇಕು. 2023 ರಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ 64 ಜನ ಮೃತಪಟ್ಟಿದ್ದರು. 2024 ರಲ್ಲಿ 42 ಮಂದಿ ಮೃತಪಟ್ಟ ವರದಿ ಇದೆ. ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವುದು ಪೊಲೀಸ್, ಆರ್‌ಟಿಓ ಹಾಗೂ ಸಂಬಂಧಿಸಿದ ಇಲಾಖೆಗಳು ಕೈಗೊಂಡ ಸುರಕ್ಷಿತಾ ಕ್ರಮ ಹಾಗೂ ಚಾಲಕರ ಎಚ್ಚರಿಕೆಯ ಚಾಲನೆ ಕಾರಣ ಎಂದರು.

ವಾಹನ ಚಲಾವಣೆ ಆರಂಭಿಸುವ ಮುನ್ನ ಸಂಬಂಧಿಸಿದ ದಾಖಲಾತಿಗಳು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವದನ್ನು ತಪ್ಪದೇ ಮಾಡಬೇಕು. ರಸ್ತೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆಯಿಂದ ಚಲಾಯಿಸಬೇಕು ಎಂದು ಹೇಳಿದರು.


ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್, ಹಿರಿಯ ಮೋಟಾರ್ ನಿರೀಕ್ಷಕ ಶರೀಫ್, ಡಾ.ಎಸ್.ಪರಮೇಶ್, ಅಣ್ಣೆನಹಳ್ಳಿ ಶಿವಕುಮಾರ್, ಟಿ.ಆರ್.ಸದಾಶಿವಯ್ಯ, ಡಾ.ನಾಗಭೂಷಣ್, ಡಾ.ಪ್ರದೀಪ್, ರಾಜೇಶ್ವರಿ ರುದ್ರಪ್ಪ, ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?