ತುಮಕೂರು : ಜಿಲ್ಲೆಯ ಕುಣಿಗಲ್ ತಾಲೂಕು ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 5ರಂದು ಜರುಗುವ ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತಾದಿಗಳು ಆಗಮಿಸುವುದರಿಂದ ಯಾವುದೇ ರೀತಿ ಬೆಂಕಿ ಅವಘಡ-ಕಾಲ್ತುಳಿತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬೆಂಕಿ ಅವಘಡಗಳುಂಟಾದಲ್ಲಿ ಪಾರಾಗುವ ಹಾಗೂ ಕಾಲ್ತುಳಿತ, ನೂಕು-ನುಗ್ಗಲುಗಳಾಗದಂತೆ ಸಂಯಮದಿಂದ ನಡೆದುಕೊಳ್ಳುವ ಬಗ್ಗೆ ಎಲ್‌ಇಡಿ ಪರದೆ ಅಳವಡಿಸಿ ಕಿರು ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜನ ಜಾಗೃತಿ ಮೂಡಿಸಬೇಕು ಎಂದರು.
ಭಕ್ತಾದಿಗಳಿಗೆ ವಿತರಿಸುವ ಪ್ರಸಾದ ತಯಾರಿಸಲು ಶುದ್ಧ ಕುಡಿಯುವ ನೀರನ್ನೇ ಬಳಸಬೇಕು. ಸ್ವಾಮಿಯ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಬೇಕು. ಜಾತ್ರಾ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜಾತ್ರಾ ಕೆಲಸ-ಕಾರ್ಯಗಳಿಗೆ ನಿಯೋಜಿಸುವ ಸಿಬ್ಬಂದಿಗೆ ಧರಿಸಲು ದೇವಸ್ಥಾನದ ಚಿಹ್ನೆಯಿರುವ ಒಂದೇ ಬಣ್ಣದ ಮೇಲು ಅಂಗಿಯನ್ನು ನೀಡಬೇಕು. ಇದರಿಂದ ಸಮಸ್ಯೆಗಳುಂಟಾದಾಗ ನೆರವು ಕೋರಲು ಭಕ್ತಾದಿಗಳಿಗೆ ಅನುವಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ ಮಾರ್ಚ್ 29 ರಿಂದ ಏಪ್ರಿಲ್ 12ರವರೆಗೆ ನಡೆಯುವ ಜಾತ್ರೆ ವೇಳೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಿ ತುರ್ತು ಚಿಕಿತ್ಸಾ ವಾಹನ ಹಾಗೂ ಔಷಧಿಯೊಂದಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸ್ವಾಮಿಯ ರಥದ ರಿಪೇರಿ ಕೆಲಸಗಳಿದ್ದಲ್ಲಿ ಒಂದು ವಾರ ಮುಂಚಿತವಾಗಿ ತಿಳಿಸಬೇಕು ಹಾಗೂ ರಥದ ದೃಢತೆ ಬಗ್ಗೆ ದೃಢೀಕರಣ ಪತ್ರ ನೀಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.

ಜಾತ್ರೆಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದರಲ್ಲದೆ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ವಿತರಿಸುವ ಬಗ್ಗೆ ಚರ್ಚಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೋವ್‌ಗಳನ್ನು ಇಟ್ಟಿರುವ ಅಂಗಡಿಗಳಲ್ಲಿ 6 ಕೆ.ಜಿ. ಸಾಮರ್ಥ್ಯದ ಎಬಿಸಿ ಪುಡಿ(ಅಗ್ನಿ ನಂದಕ)ಯನ್ನು ಇಟ್ಟುಕೊಂಡಿದ್ದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಬಹುದೆಂದು ಸಲಹೆ ನೀಡಿದರು.
ಸಭೆಯಲ್ಲಿ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಆರೋಗ್ಯ, ಅಗ್ನಿಶಾಮಕ, ಪಶುಪಾಲನಾ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ, ಕೆಎಸ್‌ಆರ್‌ಟಿಸಿ ಅಧಿಕಾರಿ ಸೇರಿದಂತೆ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.