ತುಮಕೂರು-ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವು ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ-ಬಿಇಓ ಹನುಮಂತಪ್ಪ

ತುಮಕೂರು: ಸರಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ದೊರೆಯುವಂತೆ ಮಾಡಿ, ಸರಕಾರಿ ಶಾಲೆಗಳನ್ನು ಉಳಿಸುವ ಗುರುತರ ಜವಾಬ್ದಾರಿ ಶಿಕ್ಷಕರು, ಪೋಷಕರು,ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್.ಡಿ.ಎಂ.ಸಿ ಸದಸ್ಯರುಗಳ ಮೇಲಿದೆ ಎಂದು ಬಿಇಓ ಹನುಮಂತಪ್ಪ ತಿಳಿಸಿದ್ದಾರೆ.

ನಗರದ ಉತ್ತರ ಬಡಾವಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ “ನಮ್ಮ ಶಾಲೆ, ನಮ್ಮ ಜವಾಬ್ದಾರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯತ್ತದೆ ಎಂಬ ನಂಬಿಕೆಯನ್ನು ಮಕ್ಕಳ ಪೋಷಕರಲ್ಲಿ ಉಂಟು ಮಾಡಿದರೆ, ತಾನಾಗಿಯೇ ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.ಈ ನಿಟ್ಟಿನಲ್ಲಿ ಶಿಕ್ಷಕರು,ಎಸ್.ಡಿ.ಎಂಸಿ ಸದಸ್ಯರು ಮತ್ತು ಇಲಾಖೆಯ ಜವಾಬ್ದಾರಿಯೂ ಇದೆ ಎಂದರು.

ಸರಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಉಚಿತವಾಗಿ ಪುಸ್ತಕ,ಬಿಸಿಯೂಟ, ಕ್ಷೀರಭಾಗ್ಯ,ಷೂ ಭಾಗ್ಯ ನೀಡುತ್ತಿದೆ.ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಚಿಕ್ಕಿ, ಬಾಳೆಹಣ್ಣು ಮತ್ತು ಮೊಟ್ಟೆಯನ್ನು ನೀಡುತ್ತಿದೆ.ನಾನು ಕೂಡ ಶಾಲೆಯಲ್ಲಿ ಕೊಡುತ್ತಿದ್ದ ಗೋಧಿ ನುಚ್ಚಿನ ಉಪ್ಪಿಟ್ಟು ತಿಂದು ಕಲಿತವ. ಮಕ್ಕಳ ಬೌದ್ದಿಕ ಮತ್ತು ಶಾಲೆಯ ಭೌತಿಕ ಬೆಳವಣಿಗೆ ಸರಕಾರ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುತ್ತಾ ಬಂದಿದೆ.

ಉತ್ತರ ಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಜಾಜ್ ಸಂಸ್ಥೆ ದತ್ತು ಪಡೆದು ಅಭಿವೃದ್ದಿಪಡಿಸುತಿದ್ದು,ಮುಂದಿನ ಒಂದೆರಡು ವರ್ಷಗಳಲ್ಲಿ ಇಡೀ ಶಾಲೆಯ ಚಿತ್ರಣವೇ ಬದಲಾಗಲಿದೆ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಪ್ರೇರೆಪಿಸಬೇಕು. ಹಾಗೆಯೇ ಎಸ್.ಡಿ.ಎಂ.ಸಿಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ಇತರರಿಗೆ ಮಾದರಿಯಾಗಬೇಕೆಂದು ಬಿಇಓ ಹನುಮಂತಪ್ಪ ಸಲಹೆ ನೀಡಿದರು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತರ ಬಡಾವಣೆಯ ಪದವಿಧರ ಮುಖ್ಯ ಶಿಕ್ಷಕ ಡಿ.ಶಿವಸ್ವಾಮಿ ಮಾತನಾಡಿ,ಈ ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ಅಂಗ್ಲ ಮಾಧ್ಯಮದಲ್ಲಿ ಎಲ್.ಕೆ.ಜಿ., ಯುಕೆಜಿ ನಡೆಸುತ್ತಿದ್ದು, ಈ ವರ್ಷದಿಂದ ಇಲಾಖೆವತಿಯಿಂದ ಎಲ್.ಕೆ.ಜಿ. ಮಂಜೂರಾಗುವ ಸಾಧ್ಯತೆಇದೆ.ಇದರ ಜೊತೆಗೆ ಶಿಕ್ಷಕರ ಕೊರತೆ ಇದೆ.

ಈ ಎರಡು ವಿಚಾರವಾಗಿ ಸೋಮವಾರ ಡಿಡಿಪಿಐ ಅವರಿಗೆ ಮನವಿ ಸಲ್ಲಿಸುವ ಕೆಲಸವನ್ನು ಮಾಡಲಾಗುವುದು.ನಮ್ಮ ಶಾಲೆಯಲ್ಲಿ ಪ್ರಸ್ತುತ ಒಂದರಿಂದ 8ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 465ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾದ್ಯತೆ ಇದ್ದು,ಹೆಚ್ಚುವರಿ ಮಕ್ಕಳಿಗೆ ಅಗತ್ಯವಿರುವ ಕೊಠಡಿ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರುಗಳ ಸಹಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗಂಗಾಧರ್,ಸುಧಾಕರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಓಬಯ್ಯ, ಉಪಾಧ್ಯಕ್ಷರಾದ ಜಭೀನಾಭಾನು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್,ತಿಮ್ಮೇಗೌಡ, ಎಸ್.ಡಿ.ಎಂ.ಸಿ ಸದಸ್ಯರುಗಳು,ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಪೋಷಕರುಗಳು ಭಾಗವಹಿಸಿದ್ದರು.

* ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *