ತುಮಕೂರು, ಮೇ 22: ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಗೃಹಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ತುಮಕೂರಿನ ಸಮಗ್ರ ಅಭಿವೃದ್ಧಿಗೆ ಜಿಲ್ಲೆಯ ಆಡಳಿತ ಯಂತ್ರ ಚುರುಕು, ಸುಗಮವಾಗಬೇಕು. ತಹಶೀಲ್ದಾರರ ಕಚೇರಿಗೆ ಸಾಮಾನ್ಯ ಪ್ರಜೆ, ಬಡ ರೈತ ನೋವು-ತೊಂದರೆಗಳಿಂದ ಬರುತ್ತಾನೆ. ಅವನಿಗೆ documentation ಪ್ರಕ್ರಿಯೆ ಸುಲಭವಾಗಿರಬೇಕು. ಒಂದೇ ದಾಖಲೆಗಾಗಿ ಹತ್ತು ಬಾರಿ ಅಲೆಯುವ ಪರಿಸ್ಥಿತಿ ಬಾರದಿರಲಿ. ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಆಲೋಚಿಸಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 2ನೇ ಹಂತದಲ್ಲಿ ನೇಮಕಗೊಂಡ 15 ಅಭ್ಯರ್ಥಿಗಳಿಗೆ ಅವರು ನೇಮಕದ ಆದೇಶ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.