ತುಮಕೂರು: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ ಎಂದು ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡೂ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಇವೆರಡರ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಸರ್ಕಾರಿ ನೌಕರರು ಕಚೇರಿ ಕೆಲಸದ ಒತ್ತಡದಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಡೆಗಣಿಸಬಾರದು. ಕರ್ತವ್ಯದೊಂದಿಗೆ ನಿಯಮಿತ ಧ್ಯಾನ, ವ್ಯಾಯಾಮ ಮತ್ತು ಉತ್ತಮ ಪೌಷ್ಟಿಕ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಸರ್ಕಾರಿ ನೌಕರರು ಅನಾವಶ್ಯಕವಾಗಿ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿ ಸಮಯ ವ್ಯರ್ಥ ಮಾಡದೆ, ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು ೨.೫೦ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಐದಾರು ಮಂದಿ ಮಾಡುವ ಕೆಲಸ ಒಬ್ಬರೇ ಮಾಡುವ ಒತ್ತಡದ ಪರಿಸ್ಥಿತಿಯಿದೆ. ಒತ್ತಡದಿಂದ ಹೊರಬರಲು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ನಿಯಮಿತವಾಗಿ ನಡಿಗೆ ಅಭ್ಯಾಸ ಮಾಡುವ ದೃಢ ಸಂಕಲ್ಪ ಮಾಡಬೇಕು. ಪ್ರೋಟೀನ್ ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಕೆಲಸ ಮಾಡಲು ನವ ಚೈತನ್ಯ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೌಕರರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಉತ್ತಮ ಸೇವೆ ಸಲ್ಲಿಸಲು ಸಾಧ್ಯ. ಕ್ರೀಡೆಯಿಂದ ಕೂಡಿದ ಜೀವನ ಆರೋಗ್ಯಯುತವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಾಳಜಿ ಹೊಂದಿರಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮಹಿಳಾ ನೌಕರರು ಮನೆ ಹಾಗೂ ಕಚೇರಿ ಕೆಲಸಗಳೆರಡನ್ನೂ ನಿಭಾಯಿಸಬೇಕು. ಮನೆ ಹಾಗೂ ಕಚೇರಿ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯ. ಪ್ರತಿಯೊಬ್ಬರಿಗೂ ತಾವು ಸೇವಿಸುವ ಆಹಾರದ ಬಗ್ಗೆ ಅರಿವು ಇರಬೇಕು ಎಂದರಲ್ಲದೆ, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ತಮ್ಮ ಗುರಿಯನ್ನು ಮುಟ್ಟುವ ಮನೋಭಾವ ಹೊಂದಿರಬೇಕು ಎಂದು ಹೇಳಿದರು.
ಮನುಷ್ಯನು ಗರ್ಭಧರಿಸುವ ಶಿಶುವಿನಿಂದ ಹಿಡಿದು ಮರಣದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಸರ್ಕಾರಿ ಸೇವೆಗೊಳಪಡುತ್ತಾನೆ. ಗರ್ಭಾವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆ, ಬಾಲ್ಯಾವಸ್ಥೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ, ಶಿಕ್ಷಕರಿಂದ ಉತ್ತಮ ಶಿಕ್ಷಣ, ಆರೋಗ್ಯ ಇಲಾಖೆಯ ಮೂಲಕ ಆರೋಗ್ಯಪೂರ್ಣ ಜೀವನ, ಗ್ರಾಮ ಹಾಗೂ ನಗರ ಆಡಳಿತದಿಂದ ಮೂಲ ಸೌಕರ್ಯಗಳನ್ನು ಜನರಿಗೆ ಒದಗಿಸುವಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನು ನಿರ್ಧಾರಕ ಪಾತ್ರವಹಿಸುತ್ತಾನೆ. ಜನಸಾಮಾನ್ಯರಿಗೆ ಹಂತ-ಹಂತವಾಗಿ ಸರ್ಕಾರದ ಹಲವಾರು ಸೇವೆಗಳನ್ನು ತಲುಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸರ್ಕಾರಿ ನೌಕರರಿಗೆ ಅಭಿನಂದನೆ ತಿಳಿಸುತ್ತಾ ಮೆಚ್ಚುಗೆ ಮಾತುಗಳನ್ನಾಡಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿರಲು ವೃತ್ತಿಯೊಂದಿಗೆ ಕ್ರೀಡಾ ಪ್ರವೃತ್ತಿಯನ್ನೂ ಬೆಳೆಸಿಕೊಳ್ಳಬೇಕು. ಮನಸ್ಸಿನ ಮಾತು ದೇಹ ಕೇಳುವಂತಿರಬೇಕು. ಇಲ್ಲದಿದ್ದರೆ ದೇಹ ಜಡತ್ವ ಹೊಂದುತ್ತದೆ. ಈ ನಿಟ್ಟಿನಲ್ಲಿ ಮನಸ್ಸು ಮತ್ತು ದೇಹದ ಉತ್ಸಾಹಕ್ಕಾಗಿ ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಜೇಶ್ವರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ನರಸಿಂಹರಾಜು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಡಯಟ್ ಪ್ರಾಂಶುಪಾಲ ಕೆ. ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಟಿ.ಆರ್. ಸೇರಿದಂತೆ ಮತ್ತಿತರರು ಹಾಜರಿದ್ದರು.