ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಮಾರಕವಾಗಲಿರುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಹೋರಾಟವನ್ನು ತೀವ್ರಗೊಳಿಸಲಾಗುವುದು. ಈ ಹೋರಾಟದಲ್ಲಿ ಜಿಲ್ಲೆಯ ಸರ್ವಪಕ್ಷಗಳ ಶಾಸಕರು ಬೆಂಬಲ ನೀಡುವಂತೆ ಶಾಸಕ ಬಿ.ಸುರೇಶ್‌ಗೌಡ ಕೋರಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಲಿಂಕ್ ಕೆನಾಲ್ ವಿರುದ್ಧದ ಹೋರಾಟದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮೇಲ್ಮನೆ ವಿಪಕ್ಷ ನಾಯಕಛಲವಾದಿ ನಾರಾಯಣಸ್ವಾಮಿಯವರಿಗೆ ವಿಚಾರ ತಿಳಿಸಿ ಹೋರಾಟ ಬೆಂಬಲಿಸುವಂತೆ ಕೋರಲಾಗಿದೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣರ ಸಮ್ಮುಖದಲ್ಲಿ ಸಭೆ ನಡೆಯಲಿದೆ.ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹೋರಾಟದ ಮುಂದಿನ ರೂಪುರೇಷುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಹೋರಾಟ ಬೆಂಬಲಿಸಿ ಭಾಗವಹಿಸಲು ಜಿಲ್ಲೆಯ ಸಚಿವರುಗಳಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರನ್ನೂ ಕೋರಲಾಗುವುದು ಹಾಗೂ ಲಿಂಕ್‌ಕೆನಾಲ್ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಯೋಜನೆ ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡತರಲಾಗುವುದು. ಲಿಂಕ್‌ಕೆನಾಲ್ ಯೋಜನೆಯಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ವರದಿ ನೀಡುವುದಾಗಿ ಹೇಳಿದ್ದ ಸರ್ಕಾರ ಇದೂವರೆಗೂ ನೀಡಿಲ್ಲ. ಯೋಜನೆ ನಿಲ್ಲಿಸುವವರೆಗೂ ಹೋರಾಟ ನಡೆಸುವುದಾಗಿ ಸುರೇಶ್‌ಗೌಡರು ಎಚ್ಚರಿಕೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿ ಶೇಕಡ 12ರಷ್ಟನ್ನು ಕುಣಿಗಲ್‌ಗೆ ಹರಿಸುವುದರಲ್ಲಿ ನಮ್ಮ ಅಭ್ಯಂತರವಿಲ್ಲ, ಆದರೆ ಎಕ್ಸ್ಪ್ರೆಸ್‌ಕೆನಾಲ್ ನಿರ್ಮಿಸಿ ಮಾಗಡಿ ಹಾಗೂ ಅಲ್ಲಿಂದ ಮುಂದಕ್ಕೆ ನೀರು ತೆಗೆದುಕೊಂಡು ಹೋಗುವುದನ್ನು ವಿರೋಧಿಸುತ್ತೇವೆ. ಇದರಿಂದ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ ಎಂದರು.

ಕೆನಾಲ್ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ನಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕಲು ಜಿಲ್ಲೆಯಲ್ಲಿ ಪಕ್ಷಾತೀತ ಹೋರಾಟ ಮಾಡಬೇಕು ಎಂದು ಹೇಳಿದರು.
ಮುಖಂಡರಾದ ಜಿಲ್ಲಾ ವಕ್ತಾರರಾದ ಟಿ.ಆರ್.ಸದಾಶಿವಯ್ಯ, ಸಿದ್ದೇಗೌಡ,ಜಿಲ್ಲಾ ಮಾಧ್ಯಮ ಸಂಯೋಜಕರಾದ ಜೆ.ಜಗದೀಶ್ ಇತರರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ