ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ,ಹಿರಿಯ,ಸಜ್ಜನ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡುವುದು ತರವಲ್ಲ. ಇದನ್ನು ನಾನು ಖಂಡಿಸುತ್ತೇನೆ. ತಮ್ಮ ಹೇಳಿಕೆ ಬಗ್ಗೆ ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಯ ಕ್ಷಮೆಯಾಚಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸಚಿವರ ಗೃಹಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಕೆಗಳು ಏನೇ ಇರಲಿ ಅದು ವೈಯುಕ್ತಿಕ ಮಟ್ಟಕ್ಕೆ ಇಳಿಯಬಾರದು. ಈ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಮತ್ತು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ವೈಯಕ್ತಿಕ ಮಟ್ಟದ ಆರೋಪ,ಪ್ರತ್ಯಾರೋಪ ಕೈಬಿಡಬೇಕು.
ಟೀಕೆ ಸಂದರ್ಭದಲ್ಲಿ ಪದ ಬಳಕೆ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸುವುದು ಸೂಕ್ತವೆಂದರು. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಗೌರವವಿದೆ. ಯಾವುದೇ ವಿಚಾರ ಬಂದರೂ ಅಲ್ಲಿ ಗಲಭೆ ನಡೆದಿಲ್ಲ, ಸುಸಂಸ್ಕೃತ ಜನರಿರುವ ಕ್ಷೇತ್ರ ಅದು, ಹಾಲಿ ಮತ್ತು ಮಾಜಿ ಶಾಸಕರಿಬ್ಬರಿಗೂ ಸಂದರ್ಭೋಚಿತ ಸಹಾಯ ಮಾಡಿದ್ದೇನೆ. ವೈಯಕ್ತಿಕ ಕಚ್ಚಾಟ ಬಿಡಿ,ಗೌರವದಿಂದ ನಡೆದುಕೊಳ್ಳಿ ಎಂದು ಇಬ್ಬರಿಗೂ ಕೆ. ಎನ್.ರಾಜಣ್ಣ ಸಲಹೆ ನೀಡಿದರು.

ಲಿಂಕ್ ಕೆನಾಲ್‌ಗೆ ಸಂಪೂರ್ಣ ವಿರೋಧ:ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಾನು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ತೀವ್ರ ವಿರೋಧ ಇದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲೂ ಪರಮೇಶ್ವರ್ ಅವರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಲಿಂಕ್ ಕೆನಾಲ್ ಎಕ್ಸ್ಪ್ರೆಸ್ ಡಾ.ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದರು. ನಂತರ ಯಡಿಯೂರಪ್ಪ ಸರಕಾರ ಬಂದಾಗ ಅದನ್ನು ರದ್ದುಪಡಿಸಿದ್ದರು. ಹಾಗಾಗಿ ಪ್ರಸ್ತುತ ಈ ಕಾಮಗಾರಿ ವಿಚಾರದಲ್ಲಿ ಪರಮೇಶ್ವರ್ ಅವರು ಕಟ್ಟು ಬಿದ್ದಿದ್ದಾರೆ. ಆದರೂ ಈಗಲೂ ಪರಮೇಶ್ವರ್ ಆದಿಯಾಗಿ ಈ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ಇದ್ದು, ಯಾವುದೇ ಕಾರಣಕ್ಕೂ ರಾಮನಗರಕ್ಕೆ ನೀರು ಹರಿಯಲು ಬಿಡುವುದಿಲ್ಲ ಎಂದರು.
ಶೋಷಿತರ ಸಮಾವೇಶ:

ರಾಜ್ಯದಲ್ಲಿ ಶೋಷಿತರ ಸಮಾವೇಶ ಮಾಡುವ ಸಂಬಂಧ ಈಗಾಗಲೇ ವರಿಷ್ಠರ ಗಮನಕ್ಕೂ ತರಲಾಗಿದೆ. ಸಮಾವೇಶವನ್ನು ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ,ಹುಬ್ಬಳ್ಳಿ,ಧಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಎಐಸಿಸಿ ಅಧ್ಯಕ್ಷರು,ರಾಹುಲ್‌ಗಾಂಧಿ,ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ನಾಯಕರುಗಳನ್ನು ಆಹ್ವಾನಿಸಲಾಗುವುದು ಎಂದು ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ದಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ,ಮಂತ್ರಿಗಿರಿಯನ್ನು ಬಿಡಲು ಸಿದ್ದ. 2023 ರ ಮೇ 18 ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ.
ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ.ಈ ಬಗ್ಗೆ ವರಿಷ್ಠರ ಭೇಟಿಯಾದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದೇನೆ.ಯಾವ ಲೋಕಸಭಾ ಚುನಾವಣೆ ಎಂಬುದನ್ನು ವರಿಷ್ಠರು ಸ್ಪಷ್ಟಪಡಿಸಬೇಕೆಂದು ಸಹ ಮನವಿ ಮಾಡಿರುವುದಾಗಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

5 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಈಗಾಗಲೇ ನಮ್ಮ ಪಕ್ಷದ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಅವರು ಸಹ ಅದನ್ನೇ ಹೇಳಿದ್ದಾರೆ. ಹಾಗಾಗಿ ನಾನು ಸಹ ಅವರು ಮಾತನ್ನು ನಂಬಿದ್ದೇನೆ ಎಂದು ಹೇಳಿದರು.
ಮುಂದಿನ ಮಾರ್ಚ್ 17 ಕ್ಕೆ ಜಾತಿ ಗಣತಿ ಬಿಡುಗಡೆ:
ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟದಲ್ಲಿ ೨೦೨೫ರ ಮಾರ್ಚ್ 17 ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿಯ ಬಗ್ಗೆ ವಿಸ್ಕೃತವಾಗಿ ಚರ್ಚೆ ನಡೆಸಿ ಪಕ್ಷದ ಪ್ರಣಾಳಿಕೆಯಲ್ಲಿ ಒಪ್ಪಿಕೊಂಡಿರುವಂತೆ ಒಳ ಮೀಸಲಾತಿ ಜಾರಿಗೆ ತರಲು ಸಿದ್ದ ಎಂದು ಕೆ.ಎನ್.ರಾಜಣ್ಣ ನುಡಿದರು.
ನಬಾರ್ಡ್ ಕಳೆದ ಸಾಲಿಗೆ ಹೊಲಿಕೆ ಮಾಡಿದರೆ ಶೇ೫೮ರಷ್ಟು ಅನುದಾನ ಕಡಿತ ಮಾಡಲಾಗಿದೆ. ಇದರಿಂದ ರೈತ ಮೇಲೆ ದೊಡ್ಡ ಹೊಡೆತ ಬೀಳಲಿದೆ.ಇದನ್ನು ಮನವರಿಕೆ ಮಾಡಿ ಕೇಂದ್ರ ಸಹಕಾರ ಮತ್ತು ಹಣಕಾಸು ಸಚಿವರುಗಳಿಗೆ ಪತ್ರ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಲು ಕೋರಿದ್ದೇನೆ.
ಗ್ರಾಮಲೆಕ್ಕಾಧಿಕಾರಿಗಳು ನಡೆಸುತ್ತಿರುವ ಧರಣಿಗೆ ತೆರಳಿ ಅವರ ಮನವಿಯನ್ನು ಆಲಿಸಲಿದ್ದೇನೆ ಕಂದಾಯ ಸಚಿವರು ಈ ಬಗ್ಗೆ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ ಶೀಘ್ರದಲ್ಲಿಯೇ ಅವರ ಸಮಸ್ಯೆಗಳು ಬಗೆಹರಿಯಲಿವೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
- ಕೆ.ಬಿ.ಚಂದ್ರಚೂಡ್