ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀವೀರಭದ್ರಸ್ವಾಮಿ ರಥೋತ್ಸವ ಇಂದು ಅದ್ಧೂರಿಯಾಗಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಚೋಳರ ಕಾಲದ ದೇವಾಲಯ ಇದಾಗಿದ್ದು ಐದು ನೂರು ವರ್ಷಗಳ ಇತಿಹಾಸವಿದೆ.ಪ್ರತಿ ವರ್ಷ ಯುಗಾದಿ ಹಬ್ಬದ ನಂತರದ 15 ದಿನಗಳಿಗೆ ಆರಂಭವಾಗುವ ಶ್ರೀವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ, ಸುಮಾರು ಒಂದು ವಾರಗಳ ನಡೆಯುವುದು ವಾಡಿಕೆ.ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ರಥ ಹೋಮ, ರಥ ಪ್ರತಿಷ್ಠಾಪನೆ ನಡೆದು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಹರಳೂರು ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವ ನಡೆಯಿತು.ಸರ್ವಾಲಂಕೃತನಾದ ಶ್ರೀವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಿ,ರಥೋತ್ಸವ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ 7:30ಕ್ಕೆ ಗ್ರಾಮದ ಶ್ರೀವೀರಭದ್ರಸ್ವಾಮಿ ಕಲಾವೃಂದದ ಕಲಾವಿದರಿಂದ ಶನಿ ಪ್ರಭಾವ ಅಥವಾ ನಲ್ಲತಂಗಾದೇವಿ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಿತು.ರಥೋತ್ಸವದ ನಂತರ ಶ್ರೀವೀರಭದ್ರಸ್ವಾಮಿಗೆ ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಿತು. ರಾತ್ರಿ 8.30ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿವಾಹನ ಸೇವೆಗಳು ನೆರವೇರಿಸುವ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಮುಕ್ತಾಯಗೊಂಡವು.
ರಥೋತ್ಸವದಲ್ಲಿ ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಶಂಕರಯ್ಯ,ಕಾರ್ಯದರ್ಶಿ ಹೆಚ್.ಎಸ್.ಉಮಾಶಂಕರ್ ದಾಸೋಹ ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.ಕುಮಾರಯ್ಯ, ಕಾರ್ಯದರ್ಶಿ ಹೆಚ್.ಬಿ.ರುದ್ರೇಶ್, ಸೇವಾ ಸಮಿತಿ ಮತ್ತು ದಾಸೋಹ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರುಗಳು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ