ತುಮಕೂರು-ಇತಿಹಾಸ-ಪ್ರಸಿದ್ಧ-ಶೆಟ್ಟಿಹಳ್ಳಿ-ಬ್ರಹ್ಮ-ರಥೋತ್ಸವಕ್ಕೆ- ತಹಸೀಲ್ದಾರ್-ಪಿ.ಎಸ್.ರಾಜೇಶ್ವರಿ-ಚಾಲನೆ

ತುಮಕೂರು– ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸದಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೇ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ 1.10 ಗಂಟೆಗೆ ರಥಕ್ಕೆ ದೇವರ ಕೂರಿಸಿದ ಬಳಿಕ ಗರುಡ ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ರಥದ ಗಾಲಿ ಮುಂದಕ್ಕೆ ಹರಿಯುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ, ಜೈಕಾರ ಘೋಷಣೆಗಳು ಮುಗಿಲು ಮುಟ್ಟಿದವು.

ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು.

ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ನಗರದಿಂದ ಶೆಟ್ಟಿಹಳ್ಳಿಗೆ ಹೋಗುವ ದಾರಿಯುದ್ಧಕ್ಕೂ ಹಾಗೂ ರಿಂಗ್ ರಸ್ತೆಯುದ್ದಕ್ಕೂ ಭಕ್ತಾದಿಗಳು ಪೆಂಡಾಲ್‌ಗಳನ್ನು ಹಾಕಿಕೊಂಡು ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದ್ದು ವಿಶೇಷವಾಗಿತ್ತು.

ರಥೋತ್ಸವದಲ್ಲಿ ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ರೆವಿನ್ಯೂ ಇನ್ಸ್ಪೆಕ್ಟರ್ ಆರ್.ಶಿವಾನಂದರೆಡ್ಡಿ, ಶೆಟ್ಟಿಹಳ್ಳಿ ಗ್ರಾಮ ಆಡಳಿತಾಧಿಕಾರಿ ಎನ್.ರವಿಕುಮಾರ್, ದೇವಾಲಯದ ಆಗಮಿಕರಾದ ನರಸಿಂಹಭಟ್ಟರು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?