ತುಮಕೂರು:ನಗರದ 7ನೇ ವಾರ್ಡಿನ ಅಗ್ರಹಾರದಲ್ಲಿ ಕೋಟೆ ಕೊಲ್ಲಾಪುರದಮ್ಮ ಸಮುದಾಯ ಭವನ ಉದ್ಧಾಟನೆ, ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನ ಉದ್ಘಾಟನೆ, ಗಣಪತಿ ಮೂರ್ತಿ ಹಾಗೂ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಸಮಾರಂಭ ಸೋಮಶೇಖರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದವು. ಇದರ ಅಂಗವಾಗಿ ವಿವಿಧ ಹೋಮ, ಹವನ, ವಿಶೇಷ ಪೂಜೆ, ಅಭಿಷೇಕ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶ್ರಮಜೀವಿಗಳು, ಕಾಯಕನಿಷ್ಠರಾದ ತಿಗಳ ಸಮಾಜದವರು ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದಾರೆ. ಕಿತ್ತಾಟ, ಮೇಲಾಟವಿಲ್ಲದೆ ಎಲ್ಲರೂ ಐಕ್ಯತೆಯಿಂದ ಸಮಾಜದ ಮುಖಂಡರು ತಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕುಎಂದು ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ಯಾವುದೇ ಸಮುದಾಯವಾಗಲಿ ಸಮಾಜ ಒಡೆಯುವಂತಹ ಕೆಲಸ ಮಾಡಬಾರದು.ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಏನೇ ಗೊಂದಲ, ಮನಸ್ತಾಪಗಳು ಎದುರಾದರೂ ಕುಳಿತು ಬಗೆಹರಿಸಿಕೊಂಡು ಎಲ್ಲರೂ ಹೊಂದಾಣಿಕೆಯಿಂದ ಸಾಗಿದರೆ ಸಮಾಜದ ಬೆಳವಣಿಗೆ ಸಾಧ್ಯ ಎಂಬುದಕ್ಕೆ ಈ ಸಮುದಾಯ ಭವನ ನಿರ್ಮಾಣವಾಗಿರುವುದೇ ಸಾಕ್ಷಿ.
ಇದು ಸಮಾಜಕ್ಕೆ ನೀಡಿದ ಕೊಡುಗೆ ಎಂದ ಅವರು, ತಿಗಳ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿ ಅವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ನೆರವಾಗಬೇಕು ಎಂದು ಹೇಳಿದರು.
ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಯಜಮಾನರುಗಳಾದ ಶಿವರಾಮ್, ಹನುಮಂತರಾಜು, ಟಿ.ಎಸ್.ಮಂಜುನಾಥ್, ದಾಸೇಗೌಡರು, ಕೃಷ್ಣಪ್ಪ, ಮಂಜಣ್ಣ, ಗಂಗಹನುಮಯ್ಯ, ನಗರ ಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಮಾಜಿ ಸದಸ್ಯರಾದ ಎ.ಶ್ರೀನಿವಾಸ್, ರಾಮಕೃಷ್ಣಪ್ಪ, ಮುಖಂಡರಾದ ರವೀಶ್‌ಜಹಂಗೀರ್, ಮೊದಲಾದವರು ಭಾಗವಹಿಸಿದ್ದರು.
ಕೆ.ಬಿ. ಚಂದ್ರಚೂಡ