ತುಮಕೂರು: ಭಾರತೀಯ ಸಂಸ್ಕೃತಿ – ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ನಮ್ಮ ಹಿರಿಯರು ತೋರಿಸಿದ ಮಾರ್ಗದಲ್ಲಿ ನಿಷ್ಠೆಯಿಂದ ನಡೆದು ನಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಚಿಕ್ಕಪೇಟೆಯ ಕನ್ನಡ ಸಂಘದ ಅಧ್ಯಕ್ಷ ಹೆಚ್.ಕೆ.ರಮೇಶ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಚಿಕ್ಕಪೇಟೆಯ ಪಂಚಾಂಗದ ಬೀದಿಯಲ್ಲಿರುವ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ಏರ್ಪಟ್ಟಿದ್ದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ – ಪರಂಪರೆಯ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನಗಳಿಸಿದ ತುಮಕೂರಿನ ಮಹಿಳಾ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶ್ರೀನಿವಾಸ ದೇವಾಲಯ ಸಮಿತಿ ಟ್ರಸ್ಟ್ ಉಪಾಧ್ಯಕ್ಷೆ ಅಚ್ಚಮ್ಮ, ಗೌರವಾಧ್ಯಕ್ಷೆ ಶೀಲವತಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ಅಧ್ಯಕ್ಷೆ ಸುಭಾಷಿಣಿರವೀಶ್, ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಛಾಯಾ ರಾಮಶೇಷ, ಗಾಯತ್ರಿ ಸಹಕಾರ ಸಂಘದ ಉಪಾಧ್ಯಕ್ಷ ಸಿ.ಫಣೀಶ್, ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಹಿರಿಯಣ್ಣ, ನಿವೃತ್ತ ಇಂಜಿನಿಯರ್ ರವೀಶ್, ವೇದ ವಿದ್ವಾಂಸರುಗಳಾದ ಅಶ್ವತ್ಥನಾರಾಯಣಶಾಸ್ತ್ರಿ, ಹೆಚ್.ಎಸ್.ರಾಜಾರಾವ್, ಮಧುಸೂದನರಾವ್, ಭಾಸ್ಕರ, ರಾಮಚಂದ್ರ, ಸತೀಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ನೂರಾರು ಮಹಿಳೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನೆರವೇರಿತು.