ತುಮಕೂರು - ಚಿಕ್ಕಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಕನ್ನಡ ಭಾಷಾ ಪಠ್ಯದಲ್ಲಿ ಬರುವ ಪದ್ಯಗಳನ್ನು ಗಮಕಿಗಳಿಂದ ಹಾಡಿಸಿದರೆ ಮುಂದೆ ಮಕ್ಕಳು ಕಂಠಪಾಠದೊಂದಿಗೆ ಇಂಪಾಗಿ ಹಾಡುವುದನ್ನು ಕಲಿತು ಸಂಸ್ಕಾರವಂತರೂ ಆಗುತ್ತಾರೆ’’ ಎಂದು ಗುಬ್ಬಿ ತಾಲ್ಲೂಕು, ಅಂಕಸಂದ್ರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ. ಎಸ್.ಕೃಷ್ಣಪ್ಪನವರು ಅಭಿಪ್ರಾಯಪಟ್ಟರು.
ಅವರು ನಗರದ ಹನುಮಂತಪುರ ಸರ್ಕಾರಿ ಪ್ರೌಢಶಾಲೆಯ 8,9 ಮತ್ತು 10 ನೇ ತರಗತಿಯಲ್ಲಿ ಬರುವ ಹಳಗನ್ನಡ ಪದ್ಯಭಾಗಗಳು, ವಚನಗಳು, ಕೀರ್ತನೆಗಳ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಮಕ ನಮ್ಮ ದೇಶದ ಶಾಸ್ತ್ರೀಯ ಕಲೆ. ಈ ಕಲೆ ಗುರು ಶಿಷ್ಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ಸಾಗಿಬಂದಿದೆ. ನಮ್ಮ ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಹಳ್ಳಿ ಹಳ್ಳಿಗಳಲ್ಲಿ, ಅರಳಿಕಟ್ಟೆಗಳಲ್ಲಿ, ದೇಗುಲಗಳಲ್ಲಿ ಹಿಂದೆ ನಮ್ಮ ಜನರು ಜೈಮಿನಿ ಭಾರತ, ಗದುಗಿನ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆಯ ಪದ್ಯಗಳನ್ನು ಬಾಲ್ಯದಲ್ಲಿ ಕೇಳಿದ್ದೆವು. ಈ ಕಲೆ ಉಳಿದು ಬೆಳೆಯಬೇಕೆಂದರು.
ಹಳಗನ್ನಡ ಪದ್ಯಗಳಿಗೆ ಗಮಕಿ ಪ್ರೌಢಶಾಲಾ ಶಿಕ್ಷಕಿ ಸೀತಾಲಕ್ಷ್ಮೀ ಶರ್ಮರವರ ವಾಚನಕ್ಕೆ ತಕ್ಕಂತೆ ಸರಳವಾಗಿ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ವ್ಯಾಖ್ಯಾನ ಮಾಡಿದರು.
ಅಧ್ಯಕ್ಷ ಸ್ಥಾನದಿಂದ ಎಸ್.ಪಿ.ಸಿದ್ಧಲಿಂಗಸ್ವಾಮಿ ಮಾತನಾಡಿ,ಮುಂದಿನ ವರ್ಷದಿಂದ ಎಲ್ಲಾ ಶಾಲೆಗಳಲ್ಲಿಯೂ ಈ ಗಮಕ ಕಾರ್ಯಕ್ರಮ ನಡೆಸಲು ಚಿಂತನೆ ಮಾಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಆರ್.ಎಸ್.ಸದಾಶಿವಯ್ಯ, ಡಾ.ಎಸ್.ಕೃಷ್ಣಪ್ಪ, ಎಸ್.ಪಿ.ಸಿದ್ಧಲಿಂಗಸ್ವಾಮಿ ಹಾಗೂ ಸೀಮಾಲಕ್ಷಿö್ಮ ಶರ್ಮರವರನ್ನು ಸನ್ಮಾನಿಸಲಾಯಿತು.
ಈ ವೇಳೆ ವಿದ್ಯಾರ್ಥಿ ಹಾಗೂ ಶಿಕ್ಷಕರು ಹಾಜರಿದ್ದರು.