ತುಮಕೂರು: ಸಮರ್ಪಕ ದಾಖಲೆಗಳಿಲ್ಲದ ಆಸ್ತಿಗಳನ್ನು ಬಿ-ಖಾತೆ ಮಾಡಿಕೊಡುವ ಮೂಲಕ ಆಸ್ತಿಯ ಮಾಲೀಕತ್ವವನ್ನು ಅಧಿಕೃತಗೊಳಿಸುವ ಸರ್ಕಾರದ ಕ್ರಮ ಸ್ವಾಗತಾರ್ಹ.
ಬಿ-ಖಾತಾ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ, ಎದುರಾಗಿರುವ ಗೊಂದಲಗಳನ್ನು ನಿವಾರಿಸಿ ಸಾಮಾನ್ಯ ಆಸ್ತಿ ಮಾಲೀಕರು ಸುಲಭವಾಗಿ ಬಿ-ಖಾತೆ ಮಾಡಿಸಿಕೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ, ಮಾರ್ಗದರ್ಶನ ನೀಡಬೇಕು ಎಂದು ನಗರದ ಕಾಂಗ್ರೆಸ್ ಮುಖಂಡ ಇಕ್ಬಾಲ್‌ಅಹ್ಮದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಿ-ಖಾತೆ ಮಾಡಿಸಿಕೊಳ್ಳುವ ಕಾರ್ಯದಲ್ಲಿ ಅನಗತ್ಯ ಗೊಂದಲ, ಆತಂಕ ಉಂಟು ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.ಬಿ-ಖಾತಾಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಸರಿಸುವಂತಹ ಕ್ರಮಗಳನ್ನು ನಗರಪಾಲಿಕೆ ವ್ಯಾಪ್ತಿಯ ಆಸ್ತಿ ನೋಂದಣಿಗೂ ಅನ್ವಯವಾಗುವಂತೆ ಕ್ರಮ ತೆಗೆದುಕೊಳ್ಳಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಮಾಡಿದ್ದಾರೆ.

ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡುವ ನೋಂದಾಯಿತ ಮಾರಾಟ ಪತ್ರಗಳು, ದಾನ ಪತ್ರ, ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರ, ಮಂಜೂರಾತಿ ಪತ್ರಗಳ ಆಧಾರದಲ್ಲಿ ಬಿ-ಖಾತೆ ನೀಡಿ ಆಸ್ತಿ ಮಾಲೀಕತ್ವ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಬಿ-ಖಾತಾ ನೀಡುವ ಅವಧಿಯನ್ನು ಸರ್ಕಾರ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ, ಬರುವ ಆಗಸ್ಟ್ 10ರವರೆಗೆ ಬಿ-ಖಾತೆ ಪಡೆಯಬಹುದಾಗಿದ್ದು ಇದರಿಂದ ಬಡವರಿಗೆ ಅನುಕೂಲವಾಗುತ್ತದೆ.ತುಮಕೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಬಿ-ಖಾತೆ ನೀಡುವ ಕಾರ್ಯವನ್ನು ಮತ್ತಷ್ಟು ಸರಳಗೊಳಿಸಿ, ಸುಲಭಗೊಳಿಸಬೇಕು. ಖಾತೆ ಪಡೆಯಲು ಬರುವವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಕಚೇರಿಯಲ್ಲಿ ಪ್ರತ್ಯೇಕ ವಿಭಾಗದ ವ್ಯವಸ್ಥೆ ಮಾಡಬೇಕು.ದಾರಿತಪ್ಪಿಸುವಂತಹ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು.

ಸಾರ್ವಜನಿಕರಿಗೆ ಒಂದೇ ಸುತ್ತಿನಲ್ಲಿ ಎಲ್ಲಾ ಮಾಹಿತಿ ನೀಡಬೇಕು, ಪದೇ ಪದೆ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಬಿ-ಖಾತಾ ಸಂಬಂಧ ತುಮಕೂರು ನಗರಪಾಲಿಕೆ ನಗರದಲ್ಲಿ ಮತ್ತೊಂದು ಸುತ್ತಿನ ಜನಜಾಗೃತಿ ಆಂದೋಲನ ಮಾಡಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಇಕ್ಬಾಲ್ ಅಹ್ಮದ್ ಕೋರಿದ್ದಾರೆ.
- ಕೆ.ಬಿ.ಚಂದ್ರಚೂಡ